ಬೆಳಗಾವಿ,ಡಿ.9– ರಾಜ್ಯದಲ್ಲಿ ಶೇಕಡಾ 20ರಷ್ಟು ಅನರ್ಹರು ಪಡಿತರಚೀಟಿ ಹೊಂದಿದ್ದು, ಸಮಯ ಅವಕಾಶ ತೆಗೆದುಕೊಂಡು ಬಿಪಿಎಲ್ ಪಡಿತರ ಚೀಟಿಗಳನ್ನು ಪರಿಷ್ಕರಣೆ ಮಾಡುವುದಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಘೋಷಿಸಿದ್ದಾರೆ.
ವಿಧಾನಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ನ ಕೆ.ಎಸ್.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಎಪಿಎಲ್ ಪಡಿತರಚೀಟಿ ಪಡೆಯಬೇಕಾದ ಶೇ.20ರಷ್ಟು ಮಂದಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ. ಇಂತಹ ಅನರ್ಹರನ್ನು ಪಟ್ಟಿಯಿಂದ ತೆಗೆಯಲು ಮುಂದಾಗಿದ್ದಕ್ಕೆ ಗೊಂದಲ ಉಂಟಾಯಿತು. ಹೀಗಾಗಿ ತಾತ್ಕಾಲಿಕವಾಗಿ ನಾವು ನಿಲ್ಲಿಸಿದ್ದೇವೆ.
ಗ್ರಾಮಪಂಚಾಯ್ತಿಯಿಂದ ಹೋಬಳಿ ಹಂತದವರೆಗೂ ಮಾಹಿತಿ ಪಡೆದುಕೊಂಡು ಪರಿಷ್ಕರಣೆ ಮಾಡುತ್ತೇವೆ ಎಂದು ತಿಳಿಸಿದರು.20 ವರ್ಷದಿಂದಲೂ ಪಡಿತರಚೀಟಿಯ ಗೊಂದಲ ಇದ್ದೇ ಇದೆ. ಎಲ್ಲ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಪಡಿತರಚೀಟಿ ಪಡೆಯುವ ಫಲಾನುಭವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಂದು ಹೇಳುವುದಿಲ್ಲ.
20 ವರ್ಷದಿಂದ ಉಂಟಾಗಿರುವ ಸಮಸ್ಯೆಯನ್ನು ಇತ್ಯರ್ಥಪಡಿಸಲು ಮುಂದಾದಾಗ ಗೊಂದಲ ಉಂಟಾಗಿದೆ.ಯಾರು ನಿಜವಾದ ಫಲಾನುಭವಿಗಳು ಇರುತ್ತಾರೋ ಅವರ ಪಡಿತರಚೀಟಿಯನ್ನು ರದ್ದುಪಡಿಸುವುದಿಲ್ಲ. ಪಕ್ಷಾತೀತವಾಗಿ ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕು ಎಂದು ಮುನಿಯಪ್ಪ ಮನವಿ ಮಾಡಿದರು.
1.20 ಲಕ್ಷಕ್ಕಿಂತ ಹೆಚ್ಚು ತಲಾ ಆದಾಯ ಹೊಂದಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರು ಎಂದು ಕೇಂದ್ರ ಸರ್ಕಾರವೇ ಮಾರ್ಗಸೂಚಿ ಹೊರಡಿಸಿದೆ. ಎಪಿಎಲ್ನಿಂದ ಬಿಪಿಎಲ್ಗೆ ವರ್ಗಾವಣೆಗೊಳ್ಳುವಾಗ ಕೆಲವು ಗೊಂದಲಗಳಾಗುತ್ತವೆ. ಸರ್ಕಾರಿ ನೌಕರರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರು. ಇದನ್ನು ಈಗ ರದ್ದುಪಡಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದರು.
ರಾಜ್ಯದಲ್ಲಿ ಅಂತ್ಯೋದಯ ಅನ್ನ ಯೋಜನೆಯಲ್ಲಿ ಹತ್ತು ಲಕ್ಷದ 80 ಸಾವಿರದ 688 ಪಡಿತರಚೀಟಿಗಳಿದ್ದರೆ, 43,66,756 ಫಲಾನುಭವಿಗಳು. ಎನ್ಎಫ್ಎಸ್ಎ 1,02,84,000 ಕಾರ್ಡ್ಗಳಲ್ಲಿ (36,17,772 ಫಲಾನುಭವಿಗಳು), ಆದ್ಯತಾ ಪಡಿತರಚೀಟಿ 14,74,582 ಕಾರ್ಡ್ಗಳು (38,71,596 ಫಲಾನುಭವಿಗಳು).
ಒಟ್ಟು ಆದ್ಯತಾ ಪಡಿತರಚೀಟಿಗಳು 1,28,39,230 ( 4, 42,56,124 ಫಲಾನುಭವಿಗಳು) ಆದ್ಯೇತರ ಪಡಿತರ ಚೀಟಿಗಳು 2525418( ಫಲಾನುಭವಿಗಳು 8645628).
ಒಟ್ಟು ಪಡಿತರ ಚೀಟಿಗಳು 1,53,64,648(ಫಲಾನುಭವಿಗ ಳು 5,29,01,752) ಇದ್ದಾರೆಂದು ಮಾಹಿತಿ ನೀಡಿದರು.
ಪ್ರತಿ ಪಡಿತರಚೀಟಿಗೆ 35 ಕೆಜಿ ಆಹಾರಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ಪ್ರಸ್ತುತ 21 ಕೆಜಿ ಅಕ್ಕಿ, 14 ಕೆಜಿ ರಾಗಿ, ಜೋಳ, ಅದೇ ರೀತಿ ಪ್ರತಿ ಸದಸ್ಯರಿಗೆ 5 ಕೆಜಿ ಅಂತೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದ್ದು, ಪ್ರಸ್ತುತ 3 ಕೆಜಿ ಅಕ್ಕಿ ಮತ್ತು ಪ್ರಾದೇಶಿಕ ಆಹಾರ ಪದ್ದತಿಗೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ 2 ಕೆಜಿ ರಾಗಿ/ಜೋಳ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.