ಮುಂಬೈ, ಫೆ.7- ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಲೋಹಾ ತಹಸಿಲ್ ವ್ಯಾಪ್ತಿಯ ಕೋಷ್ಟವಾಡಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ವೊಂದರಲ್ಲಿ ಆಹಾರ ಸೇವಿಸಿದ ಸುಮಾರು 2000 ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಸಾವರಗಾಂವ್, ಪೊಸ್ಟ್ವಾಡಿ, ರಿಸಂಗಾವ್ ಮತ್ತು ಮಸ್ಕಿ ಗ್ರಾಮಗಳ ಜನರು ಒಟ್ಟುಗೂಡಿ ಧಾರ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಆಹಾರ ಸೇವಿಸಿದರು. ಇಂದು ಬೆಳಿಗ್ಗೆ ಜನರು ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 150 ಜನರನ್ನು ನಾಂದೇಡ್ನ ಲೋಹಾದಲ್ಲಿರುವ ಉಪ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ನಂತರ 870 ರೋಗಿಗಳನ್ನು ಶಂಕರರಾವ್ ಚೌಹಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಕಡೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಾಂದೇಡ್ನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಅಗತ್ಯವಿದ್ದಲ್ಲಿ ಹೆಚ್ಚಿನ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಅಸ್ವಸ್ಥಗೊಂಡಿರುವ ಜನರ ಗ್ರಾಮಗಳಲ್ಲಿ ಸಮೀಕ್ಷೆಗಾಗಿ ಐದು ತಂಡಗಳನ್ನು ನಿಯೋಜಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಕ್ಷಿಪ್ರ ಪ್ರಕ್ರಿಯೆ ತಂಡವನ್ನು ಕೂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಎಲ್ಲರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ನಂತರ ರೋಗಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.