ಬೆಂಗಳೂರು, ನ.27– ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಮೂರ್ನಾಲ್ಕು ಮಂದಿಯನ್ನು ದೆಹಲಿಗೆ ಕರೆಸಿ ಚರ್ಚೆ ಮಾಡುತ್ತೇವೆ. ಮುಂದೆ ಯಾವ ರೀತಿ ನಡೆಯಬೇಕು ಎಂಬ ಸೂಚನೆ ನೀಡಿ, ಎಲ್ಲಾ ಗೊಂದಲಗಳನ್ನು ಬಗೆ ಹರಿಸುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.
ದೆಹಲಿಗೆ ತೆರಳುವ ಮುನ್ನ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಾನು ದೆಹಲಿಗೆ ಹೋದ ಬಳಿಕ ಮೂರ್ನಾಲ್ಕು ಮಂದಿ ಪ್ರಮುಖರನ್ನು ಕರೆಸಿ ಮಾತನಾಡುತ್ತೇನೆ. ಆ ಚರ್ಚೆಯ ಬಳಿಕ ಮುಂದೆ ಯಾವ ರೀತಿ ನಡೆಯಬೇಕು ಎಂಬ ನಿರ್ದೇಶನ ನೀಡಲಾಗುವುದು. ಈ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ ಎಂದು ಹೇಳಿದರು. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಇತರ ಸದಸ್ಯರು, ಸಿಎಂ, ಡಿಸಿಎಂ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊನೆಗೂ ಎಚ್ಚೆತ್ತುಕೊಂಡ ಹೈಕಮಾಂಡ್:
ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡು ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ಕೊನೆಗೂ ಹೈಕಮಾಂಡ್ ಮಧ್ಯ ಪ್ರವೇಶಿಸುವ ನಿರ್ಧಾರ ಮಾಡಿದೆ.
ಇದಕ್ಕೂ ಮೊದಲು ದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಡಿ.ಕೆ.ಸಹೋದರರ ಜೊತೆ, ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಅದರ ಬಳಿಕವೂ ರಾಜಕೀಯ ಚಟುವಟಿಕೆಗಳು ತಣ್ಣಗಾಗಿಲ್ಲ.
ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲೇ ಬೇಕೆಂದು ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಡಿ.ಕೆ. ಬಣ ಶಾಸಕರು ದೆಹಲಿಯಾತ್ರೆ ನಡೆಸಿದ್ದರು. ಇತ್ತ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಪರವಾಗಿ, ಸಚಿವರು, ಹಿರಿಯ ನಾಯಕರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ.
ಪಂಚಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದೇವೆ ಎಂಬ ಹಮು-ಬಿಮಿನಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿನ ಬೆಳವಣಿಗೆಗೆಳು ಭಾರಿ ಹಾನಿ ಮಾಡಿವೆ. ಜನ ಅಭೂತಪೂರ್ವವಾದ ಬೆಂಬಲದೊಂದಿಗೆ ಬಹುಮತ ನೀಡಿದ್ದರೂ, ಉತ್ತಮ ಆಡಳಿತ ನೀಡುವ ಬದಲಾಗಿ, ಕುರ್ಚಿಗಾಗಿ ಕಾಂಗ್ರೆಸ್ಸಿಗರು ಕಿತ್ತಾಡುತ್ತಿದ್ದಾರೆ ಎಂಬ ಟೀಕೆಗಳು ಜೋರಾಗಿವೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಯಾವುದೇ ಹೇಳಿಕೆ ನೀಡದೆ, ಶಿಸ್ತು ಕಾಪಾಡಿಕೊಳ್ಳುವ ಪ್ರಯತ್ನ ನಡೆಸಿದ್ದರೂ, ಅವರ ಬೆಂಬಲಿಗರ ಚಟುವಟಿಕೆಗಳು ಕದನ ಕುತೂಹಲ ಹೆಚ್ಚಿಸಿವೆ. ಕಾಂಗ್ರೆಸ್ನ ಬೆಳವಣಿಗೆಗಳು, ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿವೆ. ಕಳೆದ 15 ದಿನಗಳಿಂದಲೂ ಇದೇ ಚರ್ಚೆಗಳು ರಾಜಕಾರಣವನ್ನು ರಾಡಿ ಮಾಡಿವೆ. ಆರಂಭದಲ್ಲೇ ತಿಳಿ ಹೇಳಿ ಸರಿ ಮಾಡುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಹೀಗಾಗಿ ಹೈಕಮಾಂಡ್ ಅಂತಿಮ ಘಟ್ಟದ ಸಭೆ ನಡೆಸಲು ಮುಂದಾಗಿದೆ.
ಕರ್ನಾಟಕದ ಬದಲಾಗಿ ದೆಹಲಿಯಲ್ಲಿ ಮಾತುಕತೆಗಳು ಮತ್ತು ಸಂಧಾನ ಪ್ರಕ್ರಿಯೆಗಳು ನಡೆಯಲಿವೆ ಎಂದು ಖುದ್ದು ಖರ್ಗೆ ಅವರೇ ಸ್ಪಷ್ಟಪಡಿಸಿದ್ದಾರೆ. ಮೂರ್ನಾಲ್ಕು ದಿನಗೊಳಗಾಗಿ ನಡೆಯಬಹುದಾದ ಈ ಮಾತುಕತೆಗಳ ಬಳಿಕವಾದರೂ ಕಾಂಗ್ರೆಸ್ನಲ್ಲಿ ಕುರ್ಚಿ ಕಿತ್ತಾಟ ತಿಳಿಯಾಗುವ ವಾತಾವರಣ ನಿರ್ಮಾಣವಾಗಬಹುದೇ ಎಂಬ ಕುತೂಹಲ ಕಾಡುತ್ತಿದೆ.
