ಕೊಪ್ಪಳ, ನ.27– ಕಾಂಗ್ರೆಸ್‌ನ ಯಾವ ನಾಯಕರೂ ಬಿಜೆಪಿಯವರ ಬಳಿ ಹೋಗಿ ಬೆಂಬಲ ಕೊಡಿ ಎಂದು ಕಾಲು ಕಟ್ಟಿಕೊಂಡಿಲ್ಲ. ಹಸಿದು ಕೂತಿರುವ ವಿರೋಧ ಪಕ್ಷಗಳು ಅನಗತ್ಯವಾದ ಚರ್ಚೆಯನ್ನು ಹುಟ್ಟು ಹಾಕಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆಕ್ಷೇಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹೀಗಾಗಿ ನಾವೆಲ್ಲರೂ ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಸಹಿ ಸಂಗ್ರಹ ಸೇರಿದಂತೆ ಯಾವುದೇ ಬೆಳವಣಿಗೆಗಳಿಲ್ಲ. ಇದೆಲ್ಲವೂ ಬಿಜೆಪಿಯವರ ಕಪೋಕಲ್ಪಿತ ವದಂತಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರು ಹಸಿದು ಕೂತಿದ್ದಾರೆ. ನಮ ನಾಯಕರು ಯಾರೂ ಅವರ ಬಳಿ ಹೋಗಿ ಬೆಂಬಲಕ್ಕೆ ಅಂಗಲಾಚಿಲ್ಲ. ನಿಮ ಬಳಿ ಬರುತ್ತೇವೆ ಎಂದು ಕಾಲು ಕಟ್ಟಿಕೊಂಡಿದ್ದೇವೆಯೇ? ಡಿ.ಕೆ.ಶಿವಕುಮಾರ್ ಬಂದರೂ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿರುಗೇಟು ನೀಡಿದರು.
ಬಿಜೆಪಿಯ ಸರ್ಕಾರದ ಅವಧಿಯಲ್ಲಿ ಏನೆಲ್ಲ ನಡೆದಿತ್ತು ಎಂಬುದನ್ನು ಆ ಪಕ್ಷದ ನಾಯಕರು ಮರೆತಿದ್ದಾರೆ. ಶಾಸಕರು ಎಲ್ಲಾ ಓಡಾಡಿದರೆ, ಎಷ್ಟೆಲ್ಲ ಸಮಸ್ಯೆಗಳಾಗಿತ್ತು. ಅದರ ಬಗ್ಗೆ ಮಾತನಾಡಲಿ, ಬಿಜೆಪಿಯವರ ತಟ್ಟೆಯಲ್ಲಿ ನೊಣ ಬಿದ್ದಿದೆ. ಆದರೆ ಬೇರೆಯವರ ತಟ್ಟೆಯಲ್ಲಿರುವ ನೊಣವನ್ನು ಹುಡುಕುತ್ತಿದ್ದಾರೆ. ನಮಗಿಂತಲೂ ಬಿಜೆಪಿಯವರ ಅವಧಿಯಲ್ಲಿ 100 ಪಟ್ಟು ಸಮಸ್ಯೆಗಳು ಹೆಚ್ಚಾಗಿದ್ದವು ಎಂದು ಹೇಳಿದರು.
ಕೊಪ್ಪಳ ಜಿಲ್ಲೆಗೆ ಇನ್ನೂ ಎರಡು ಸಚಿವಸಂಪುಟ, ಸಚಿವ ಸ್ಥಾನ ದೊರೆಯುವ ಬಗ್ಗೆ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ಜನ ಸಚಿವರಾಗಲೀ ಅಥವಾ ಇನ್ನೂ ಒಂದು ಸಚಿವ ಸ್ಥಾನ ಹೆಚ್ಚಾಗಲಿಲೀ ಅದನ್ನು ಸ್ವಾಗತಿಸುತ್ತೇನೆ ಎಂದರು.
