ನವದೆಹಲಿ, ಮೇ- ನ್ಯಾಯಾಂಗದ ಪಾರದರ್ಶಕತೆ ಮತ್ತು ನಂಬಿಕೆಯನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತಮ್ಮ ಆಸ್ತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಮತ್ತು ನ್ಯಾಯಾಲಯದ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡಲು ಒಪ್ಪಿಕೊಂಡಿರುವ ಬೆನ್ನಲ್ಲೇ ಹಲವು ನ್ಯಾಯಾಧೀಶರು ತಮ್ಮ ಆಸ್ತಿಯ ವಿವರಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಪಿಪಿಎಫ್ ಖಾತೆಯಲ್ಲಿ 1.06 ಕೋಟಿ ಜೊತೆಗೆ 55.75 ಲಕ್ಷ ಸ್ಥಿರ ಠೇವಣಿ ಮತ್ತು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಎರಡು ಮಲಗುವ ಕೋಣೆಗಳ ಡಿಡಿಎ ಫ್ರಾಟ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟ ಗ್ರಾಮದಲ್ಲಿ ನಾಲ್ಕು ಕೊಠಡಿಗಳ ಫ್ಲಾಟ್ ಹೊಂದಿದ್ದಾರೆ. ಇದಲ್ಲದೆ, ಗುರುಗ್ರಾಮ್ ನಲ್ಲಿರುವ ನಾಲ್ಕು ಮಲಗುವ ಕೋಣೆಗಳ ಫ್ಲಾಟ್ ನಲ್ಲಿ ಅವರು ಶೇ. 56 ರಷ್ಟು ಪಾಲನ್ನು ಹೊಂದಿದ್ದಾರೆ, ಉಳಿದ ಶೇ. 44 ರಷ್ಟು ಅವರ ಮಗಳು ಹೊಂದಿದ್ದಾರೆ, ಜೊತೆಗೆ ವಿಭಜನೆಗೆ ಮುಂಚಿನ ಹಿಮಾಚಲ ಪ್ರದೇಶದ ಪೂರ್ವಜರ ಮನೆಯಲ್ಲಿ ಒಂದು ಪಾಲನ್ನು ಹೊಂದಿದ್ದಾರೆ.
ಮೇ 14 ರಂದು ಸಿಜೆಐ ಪಾತ್ರವನ್ನು ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರ ಬ್ಯಾಂಕ್ ಖಾತೆಗಳಲ್ಲಿ 19.63 ಲಕ್ಷ ಮತ್ತು ಅವರ ಪಿಪಿಎಫ್ ಖಾತೆಯಲ್ಲಿ 6.59 ಲಕ್ಷ ರೂ.ಗಳು ಇದೆ.
ನ್ಯಾಯಮೂರ್ತಿ ಗವಾಯಿ ಅವರು ಮಹಾರಾಷ್ಟ್ರದ ಅಮರಾವತಿಯಲ್ಲಿ ಒಂದು ಮನೆಯನ್ನು ಆನುವಂಶಿಕವಾಗಿ ಪಡೆದಿದ್ದಾರೆ. ಜೊತೆಗೆ ಮುಂಬೈ ಮತ್ತು ದೆಹಲಿಯಲ್ಲಿ ವಸತಿ ಅಪಾರ್ಟ್ ಮೆಂಟ್‌ಗಳನ್ನು ಹೊಂದಿದ್ದಾರೆ. ಅವರು ಅಮರಾವತಿ ಮತ್ತು ನಾಗುರದಲ್ಲಿ ಕೃಷಿ ಭೂಮಿಯನ್ನು ಸಹ ಅನುವಂಶಿಕವಾಗಿ ಪಡೆದಿದ್ದಾರೆ. ಅವರ ಘೋಷಿತ ಹೊಣೆಗಾರಿಕೆಗಳ ಮೊತ್ತ 1.3 ಕೋಟಿ ರೂ. ಇದೆ.
ಸುಪ್ರೀಂ ಕೋರ್ಟ್ ತನ್ನ ನ್ಯಾಯಾಧೀಶರ ಆಸ್ತಿ ಘೋಷಣೆಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಪೂರ್ಣ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ತನ್ನ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ. ಭಾರತದ ಸುಪ್ರೀಂ ಕೋರ್ಟ್ನ ಪೂರ್ಣ ಪೀಠವು ಕಳೆದ ಏಪ್ರಿಲ್ 1, 2025 ರಂದು ಈ ನ್ಯಾಯಾಲಯದ ನ್ಯಾಯಾಧೀಶರ ಆಸ್ತಿಗಳನ್ನು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ ಇರಿಸಬೇಕೆಂದು ನಿರ್ಧರಿಸಿದೆ ಎಂದು ಸುಪ್ರೀಂ ಕೋರ್ಟ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿತ್ತು.
ಸಾರ್ವಜನಿಕರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಈ ನಿರ್ಧಾರ ಕೈಗೊಳ್ಳಲಾಗಿದೆ.ಈಗಾಗಲೇ ಸ್ವೀಕರಿಸಲಾದ ನ್ಯಾಯಾಧೀಶರ ಆಸ್ತಿ ವಿವರಗಳನ್ನು ಅಪ್ ಲೋಡ್ ಮಾಡಲಾಗುತ್ತಿದೆ. ಪ್ರಸ್ತುತ ಆಸ್ತಿ ವಿವರ ಬಂದ ತಕ್ಷಣ ಇತರ ನ್ಯಾಯಾಧೀಶರ ಆಸ್ತಿ ಹೇಳಿಕೆಗಳನ್ನು ಅಪ್ ಲೋಡ್ ಮಾಡಲಾಗುತ್ತದೆ, ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ಗೆ ನೇಮಕಾತಿಗಳ ಸಂಪೂರ್ಣ ಪ್ರಕ್ರಿಯೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಇದು ಸಾರ್ವಜನಿಕ ಜಾಗೃತಿಗಾಗಿ ಹೈಕೋರ್ಟ್ ಕೊಲಿಜಿಯಂನ ಪಾತ್ರಗಳು, ರಾಜ್ಯ ಸರ್ಕಾರಗಳು, ಭಾರತ ಒಕ್ಕೂಟದಿಂದ ಬಂದ ಮಾಹಿತಿ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂನ ಪರಿಗಣನೆಯನ್ನು ಒಳಗೊಂಡಿದೆ.
ನವೆಂಬರ್ 9, 2022 ರಿಂದ ಮೇ 5, 2025 ರವರೆಗಿನ ಅವಧಿಯಲ್ಲಿ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಾತಿಗಾಗಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅನುಮೋದಿಸಿದ ಪ್ರಸ್ತಾವನೆಗಳು, ಹೆಸರುಗಳು, ಹೈಕೋರ್ಟ್, ಮೂಲ ಸೇವೆಯಿಂದ ಅಥವಾ ವಕೀಲರಿಂದ, ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ ದಿನಾಂಕ, ನ್ಯಾಯ ಇಲಾಖೆಯಿಂದ ಅಧಿಸೂಚನೆಯ ದಿನಾಂಕ, ನೇಮಕಾತಿ ದಿನಾಂಕ, ವಿಶೇಷ ವರ್ಗ (ಎಸ್.ಸಿ, ಎಸ್.ಟಿ ಮತ್ತು ಒಬಿಸಿ (ಮಹಿಳೆ) ಮತ್ತು ಅಭ್ಯರ್ಥಿಯು ಯಾವುದೇ ಹಾಲಿ ಅಥವಾ ನಿವೃತ್ತ ಹೈಕೋರ್ಟ್/ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಂಬಂಧಿಸಿದಿಯೇ ಎಂಬುದನ್ನು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.
ನ್ಯಾಯಾಧೀಶರ ಒಡೆತನದ ಆಸ್ತಿಗಳ ಕುರಿತ ಪ್ರಶ್ನೆಗಳಿಗೆ ಕಾನೂನು ಸಚಿವಾಲಯ ಸಂಸತ್ತಿನಲ್ಲಿ ಉತ್ತರಿಸಿದ ಕೆಲವು ದಿನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಕೇಂದ್ರ ಸರ್ಕಾರವು, ನ್ಯಾಯಾಧೀಶರ ಆಸ್ತಿಗಳ ಯಾವುದೇ ದಾಖಲೆಯನ್ನು ನಿರ್ವಹಿಸುತ್ತಿಲ್ಲ ಎಂದು ಮಾ.27ರಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿತ್ತು.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ತಮ್ಮ ಆಸ್ತಿ ವಿವರಗಳನ್ನು ಸಿಜೆಐಗೆ ಸಲ್ಲಿಸಬೇಕು ಎಂಬ ನಿಯಮವಿದೆ. ಇದನ್ನು ಬಹಿರಂಗ ಮಾಡಬೇಕು ಎಂಬ ಕಡ್ಡಾಯ ನಿಯಮವೇನು ಇಲ್ಲ ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ನ್ಯಾಯಮೂರ್ತಿಗಳ ಅಸ್ತಿ ಡಿಕ್ಷರೇಷನ್ ಗಾಗಿ ಈಗಾಗಲೇ ಪ್ರತ್ಯೇಕ ಸೆಕ್ಷನ್ ಇದೆ. ಕಳೆದ ಕೆಲ ವರ್ಷಗಳಿಂದ ಯಾವುದೇ ಅಪ್‌ಡೇಟ್ ಇರಲಿಲ್ಲ.
ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಮಾ.14 ರಂದು ಅಗ್ನಿ ಅವಘಡ ಸಂಭವಿಸಿತ್ತು. ಅವಘಡದ ನಂತರ ಸುಟ್ಟಿದ್ದ ಕಂತೆ ಕಂತೆ ನಗದು ಹಣ ಪತ್ತೆಯಾಗಿತ್ತು ಎನ್ನಲಾಗಿದೆ. ಆದರೆ ನ್ಯಾ. ವರ್ಮಾ ನಾನು, ನನ್ನ ಕುಟುಂಬ ಯಾವುದೇ ಹಣ ಅಲ್ಲಿ ಇರಿಸಿಲ್ಲ ಎಂದು ಹೇಳಿಕೊಂಡಿದ್ದರು. ಈ ಘಟನೆಯ ಬೆನ್ನಲ್ಲೇ ನ್ಯಾಯಾಧೀಶರ ಆಸ್ತಿ ಘೋಷಣೆ ಮುನ್ನೆಲೆಗೆ ಬಂದಿದೆ.