ನವದೆಹಲಿ,ಫೆ.22– ಇಪ್ಪತ್ತು ವರ್ಷದ ಆರ್ಕೆಸ್ಟ್ರಾ ಡ್ಯಾನ್ಸರ್ ಮೇಲೆ ಮಧ್ಯಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಮಧ್ಯಪ್ರದೇಶದ ಸಿಂಗೌಲಿಯಲ್ಲಿ ಆಘಾತ ಮೂಡಿಸಿದೆ. ತಡರಾತ್ರಿ ಪ್ರದರ್ಶನ ನೀಡಿ ಮನೆಗೆ ಮರಳುತ್ತಿದ್ದ ಸಂತ್ರಸ್ತೆಯನ್ನು ಬೈಕ್‌ನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ತಡೆದು ಆಕೆಯ ಪ್ರಿಯಕರನ ಮೇಲೆ ಹಲ್ಲೆ ನಡೆಸಿ, ಹತ್ತಿರದ ಕಾಡಿಗೆ ಎಳೆದುಕೊಂಡು ಹೋಗಿ, ಆಕೆಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಆಕೆಯ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ ನಂತರ ಎಲ್ಲಾ 6 ಆರೋಪಿಗಳನ್ನು ಬಂಧಿಸಲಾಗಿದೆ. ಈ ಘಟನೆ ಮಾಡಾ ಪೊಲೀಸ್ ಠಾಣೆ ವ್ಯಾಪ್ತಿಯ ಶೀತುಲ್ ಗ್ರಾಮದಲ್ಲಿ ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆ ತನ್ನ ಸಹೋದರಿ ಮತ್ತು ಆರ್ಕೆಸ್ಟ್ರಾದ ಇತರ ಮಹಿಳಾ ಸದಸ್ಯರೊಂದಿಗೆ ಬಹೋರ್ ಸಂಸ್ಕಾರ ಸಮಾರಂಭದಲ್ಲಿ ಡ್ಯಾನ್ಸ್ ಶೋ ನೀಡುತ್ತಿದ್ದರು.
ತಡರಾತ್ರಿ ನಡೆದ ಕಾರ್ಯಕ್ರಮ ಮುಗಿಸಿ ಅವರು ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ, ಅಡ್ಡ ಹಾಕಿದ ಆರೋಪಿಗಳು ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಆಕೆಯ ಪ್ರಿಯಕರ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆತನನ್ನು ಥಳಿಸಲಾಗಿದೆ ಎಂದು ರೇವಾ ವಲಯದ ಡಿಐಜಿ ಸಾಕೇತ್ ಪ್ರಕಾಶ್ ಪಾಂಡೆ ಹೇಳಿದ್ದಾರೆ. ನಂತರ ಅತ್ಯಾಚಾರಿಗಳು ಸಂತ್ರಸ್ತೆಯನ್ನು ಬಲವಂತವಾಗಿ ಅಪಹರಿಸಿ, ಸಖ್ಹಾನ್ ಶಿವನ ದೇವಾಲಯದ ಬಳಿಯ ಕಾಡಿಗೆ ಎಳೆದೊಯ್ದರು. ಅಲ್ಲಿ ಅವರು ರಾತ್ರಿಯಿಡೀ ಕ್ರೂರವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಸಾಮೂಹಿಕ ಅತ್ಯಾಚಾರದಿಂದ ಆಘಾತಕ್ಕೊಳಗಾಗಿದ್ದರೂ ಆ ಮಹಿಳೆ ಮನೆಗೆ ತಲುಪಿದ್ದಾರೆ. ಬಳಿಕ ತನ್ನ ಅಕ್ಕನಿಗೆ ವಿಷಯ ತಿಳಿಸಿದ್ದಾರೆ. ಇಬ್ಬರೂ ಒಟ್ಟಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರು. ಪೊಲೀಸರು ಕೂಡಲೇ ಪ್ರತಿಕ್ರಿಯಿಸಿ. ಪ್ರಕರಣ ದಾಖಲಿಸಿಕೊಂಡು, ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡಿ 6 ಆರೋಪಿಗಳನ್ನು ಬಂಧಿಸಿದರು. ಆರೋಪಿಗಳನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ.