ಬೆಂಗಳೂರು,ಜೂ.8-ರಾಜ್ಯ ವಾಣಿಜ್ಯ ತೆರಿಗೆ ಸಂಗ್ರಹಣೆಯು ಮೇ ತಿಂಗಳಿನಲ್ಲಿ 7424.31 ಕೋಟಿ ರೂ. ಆಗಿದೆ. ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಮೇ ತಿಂಗಳ ತೆರಿಗೆ ಸಂಗ್ರಹ 2240.32 ಕೋಟಿ ರೂ.ನಷ್ಟು ಕಡಿಮೆಯಾಗಿದೆ.
ಆದರೆ ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ತೆರಿಗೆ ಸಂಗ್ರಹ ಪ್ರಮಾಣ ಏರಿಕೆಯಾಗಿದೆ. ಸುಮಾರು 3 ಸಾವಿರ ಕೋಟಿಗೂ ಹೆಚ್ಚು ಹೆಚ್ಚಳವಾಗಿದೆ. ಸರಕು ಸೇವಾ ತೆರಿಗೆ ಕರ್ನಾಟಕ ಮಾರಾಟ ತೆರಿಗೆ ಹಾಗೂ ವೃತ್ತಿ ತೆರಿಗೆ ಸೇರಿ ಏಪ್ರಿಲ್-ಮೇ ತಿಂಗಳಿನಲ್ಲಿ 17088.94 ಕೋಟಿ ರೂ. ಸಂಗ್ರಹ ಇರುವುದು ವಾಣಿಜ್ಯ ತೆರಿಗೆಗಳ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ.
ಮೇ ತಿಂಗಳಿನಲ್ಲಿ 5,573.23 ಕೋಟಿ ಸರಕು ಸೇವಾ ತೆರಿಗೆ, 1731.48 ಮಾರಾಟ ತೆರಿಗೆ ಹಾಗೂ 119.60 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗಿದೆ. ಏಪ್ರಿಲ್-ಮೇ ತಿಂಗಳಿನಲ್ಲಿ 13,251.10 ಕೋಟಿ ಸರಕು ಸೇವಾ ತೆರಿಗೆ, 3542.80 ಮಾರಾಟ ತೆರಿಗೆ ಹಾಗೂ 295.04 ವೃತ್ತಿ ತೆರಿಗೆ ಸಂಗ್ರಹ ಮಾಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್-ಮೇ ತಿಂಗಳಿನಲ್ಲಿ ಈ ವರ್ಷ ತೆರಿಗೆ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.