Sunday, February 23, 2025
Homeರಾಜ್ಯಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ 22,445 ಸೈಬ‌ರ್ ವಂಚನೆ ಪ್ರಕರಣ ದಾಖಲು

ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ 22,445 ಸೈಬ‌ರ್ ವಂಚನೆ ಪ್ರಕರಣ ದಾಖಲು

22,445 cyber fraud cases registered in the state in the last one year

ಬೆಂಗಳೂರು, ಫೆ.17-ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಒಟ್ಟು 22,445 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. 2024ರಲ್ಲಿ ಆನ್ ಲೈನ್ ಮೂಲಕ ಒಟ್ಟು 298 ಕೋಟಿ ರೂಪಾಯಿ ಹಣವನ್ನು ಜನರು ಕಳೆದುಕೊಂಡಿದ್ದಾರೆ ಎಂದು ಎನ್.ಸಿ.ಆರ್.ಪಿ. ಅಂಕಿ-ಅಂಶದಿಂದ ತಿಳಿದು ಬಂದಿದೆ. ಈ ನಡುವೆ 2024ರಲ್ಲಿ ದೇಶಾದ್ಯಂತ ಒಟ್ಟು 7,79,435 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಒಟ್ಟು 22,445 ಪ್ರಕರಣಗಳು ಕರ್ನಾಟಕದಲ್ಲಿ ನಡೆದಿದೆ.

ಇದರಲ್ಲಿ 8677 ಆರೋಪಿಗಳು ಪತ್ತೆಯಾಗಿದ್ದರೂ ಕೇವಲ 643 ವಂಚಕರು ಮಾತ್ರ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಸೈಬರ್ ಕಳ್ಳರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಕೇವಲ ದೇಶದ ನಾನಾ ಕಡೆಗಳಲ್ಲಿ ಅಷ್ಟೇ ಅಲ್ಲದೇ ದುಬೈ, ಕಾಂಬೋಡಿಯಾ, ಥೈಲ್ಯಾಂಡ್, ಲಾವೋಸ್, ಮ್ಯಾನ್ಮಾರ್ ಹಾಂಗ್‌ಕಾಂಗ್‌, ಚೀನಾ ಮೂಲದ ಸೈಬರ್ ಅಪರಾಧಿಗಳು ಇದ್ದಾರೆ ಎಂಬುದು ಆತಂಕಕಾರಿ ವಿಷಯ.

ಹೀಗಾಗಿ ಜನ ಈ ವಿಷಯದಲ್ಲಿ ಜಾಗೃತ ಆಗಬೇಕು ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇನ್ನು, ಸೈಬರ್ ಅಪರಾಧಗಳಲ್ಲಿ ಡಿಜಿಟಲ್ ಅರೆಸ್ಟ್‌ನಿಂದ ಹಿಡಿದು ನಿಮಗೆ ಬಹುಮಾನ ಬಂದಿದೆ ಅಂತ, ಬಂಪರ್ ಆಫರ್ ಇದೆ ಅಂತ ವಂಚಿಸುವುದು ಸಾಮಾನ್ಯವಾಗಿದೆ.

ಡಿಜಿಟಲ್ ಅರೆಸ್ಟ್ ಬಗ್ಗೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರೇ ತಮ್ಮ ಮನ್‌ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿ, ಜನರು ಜಾಗೃತರಾಗಿ ಇರುವಂತೆ ವಿನಂತಿಸಿಕೊಂಡಿದ್ದರು. ಮಾತ್ರವಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಈ ಸೈಬರ್ ವಂಚಕರ ಬಗ್ಗೆ ಜಾಗೃತಿಯ ಜಾಹೀರಾತುಗಳು ಬರುತ್ತಲೇ ಇವೆ. ಆದರೂ, ಈ ಸೈಬ‌ರ್ ಕಳ್ಳರ ಮಾತಿಗೆ ಮರುಳಾಗಿ ಜನ ಹಣ ಕಳೆದುಕೊಳ್ಳುವುದು ಮಾತ್ರ ನಿಲ್ಲುತ್ತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅದರಲ್ಲಿಯೂ ನಗರ ಪ್ರದೇಶದ ಸುಶಿಕ್ಷಿತರು, ನೌಕರರೇ ಈ ಸೈಬರ್ ಕಳ್ಳರ ಜಾಲಕ್ಕೆ ಮರುಳಾಗುತ್ತಿರುವುದು ವಿಪರ್ಯಾಸವೇ ಸರಿ. ಹೀಗಾಗಿ, ಯಾರೇ ಸೈಬ‌ರ್ ಕಳ್ಳರು ಕರೆ ಮಾಡಿದರೂ ಜಾಣತನ ತೋರಿಸಬೇಕು ಎಂದು ಪೊಲೀಸ್ ಅಧಿಕಾರಿಗಳು ಸಲಹೆಗಳನ್ನು ನೀಡಿದರು. ಸೈಬರ್ ಕಳ್ಳರ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕಾದ ಅಗತ್ಯವಿದೆ ಎಂದು ಜನರನ್ನು ಎಚ್ಚರಿಸಿದ್ದಾರೆ.

RELATED ARTICLES

Latest News