ಬೆಂಗಳೂರು, ಡಿ.3- ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಅವರು ಅಧಿಕಾರ ಸ್ವೀಕರಿಸಲು ಬರುತ್ತಿದ್ದಾಗಲೇ ದುರಂತ ಅಂತ್ಯ ಕಂಡಿರುವುದು ಪೊಲೀಸ್ ಇಲಾಖೆಗೆ ಆಘಾತವಾಗಿದೆ. ಮೇಲ್ನೋಟಕ್ಕೆ ಜೀಪ್ ಚಾಲಕನ ಅತೀ ವೇಗ, ಅಜಾಗರೂಕತೆ ಚಾಲನೆಯಿಂದಾಗಿ ನಿಯಂತ್ರಣ ತಪ್ಪಿ ಜೀಪ್ ಉರುಳಿ ಬಿದ್ದು ಹರ್ಷಬರ್ದನ್ ಅವರು ಮೃತಪಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಚಾಲಕ ಮಂಜೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಗ್ಗೆ ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಹರ್ಷಬರ್ದನ್ ಅವರು ಪ್ರಯಾಣಿಸುತ್ತಿದ್ದ ಬೊಲೆರೋ ಜೀಪಿನಲ್ಲಿ ಸುರಕ್ಷತಾ ಕೊರತೆ ಹಾಗೂ ಏರ್ಬ್ಯಾಗ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಈ ದುರ್ಘಟನೆ ಸಂಭವಿಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಹರ್ಷಬರ್ದನ್ ಅವರನ್ನು ಹಾಸನಕ್ಕೆ ಕರೆತರುತ್ತಿದ್ದ ಚಾಲಕ ಬಹುಶಃ ನಿದ್ದೆ ಮಂಪರಿನಲ್ಲಿ ಚಾಲನೆ ಮಾಡಿರಬಹುದೆಂಬ ಅನುಮಾನ ಸಹ ವ್ಯಕ್ತವಾಗಿದೆ.ಮೈಸೂರಿನಿಂದ ಅಧಿಕಾರಿಯನ್ನು ಕರೆತರುತ್ತಿದ್ದಾಗ ಹಾಸನ ಜಿಲ್ಲೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾದಾಗ ರಸ್ತೆ ಬದಿ ಕಲ್ಲಿಗೆ ಅಪ್ಪಳಿಸಿದ್ದರಿಂದ ಅಧಿಕಾರಿಯ ತಲೆಗೆ ಗಂಭೀರ ಪೆಟ್ಟಾಗಿ ಸಾವು- ಬದುಕಿನ ನಡುವೆ ಸತತ ನಾಲ್ಕು ಗಂಟೆಗಳ ಕಾಲ ಹೋರಾಡಿ ಮೃತಪಟ್ಟಿದ್ದಾರೆ.
ಆರಕ್ಷಕರಿಗೆ ಸುರಕ್ಷತೆ ಇಲ್ಲ:
ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಲ್ಲಿ ಆರಕ್ಷಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಸಾರ್ವಜನಿಕರ ಸೇವೆಗಾಗಿಯೇ ತಮ ಜೀವನವನ್ನು ಮುಡುಪಾಗಿಡುವ ಆರಕ್ಷಕರಿಗೆ ಕನಿಷ್ಠ ಮೂಲ ಸೌಕರ್ಯ ಇಲ್ಲದಂತಾಗಿದೆ.
ಕರ್ತವ್ಯಕ್ಕೆ ತೆರಳುವ ಆರಕ್ಷಕರಿಗೆ ಉತ್ತಮ ಸೌಲಭ್ಯವಿರುವ ವಾಹನಗಳನ್ನು ನೀಡಬೇಕು. ಹಾಸನದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಾವಿಗೆ ಅವರು ಪ್ರಯಾಣಿಸುತ್ತಿದ್ದ ಜೀಪಿನಲ್ಲಿ ಕನಿಷ್ಠ ಸೌಕರ್ಯ ಇಲ್ಲದಿರುವುದೇ ಕಾರಣ ಎಂಬುವುದು ಬಹಿರಂಗವಾಗಿದೆ.
ರಾಜ್ಯದಲ್ಲಿ ಇನ್ಸ್ಪೆಕ್ಟರ್, ಡಿವೈಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು ಕೆಲಸ ಮಾಡಲು ಪ್ರಯಾಣಿಸುವ ವಾಹನಗಳಲ್ಲಿ ಸುರಕ್ಷತೆಯೇ ಇಲ್ಲ. ಬಹುತೇಕ ಅಧಿಕಾರಿಗಳು ಬೊಲೆರೋ ಜೀಪ್ಗಳಲ್ಲೇ ಓಡಾಡುತ್ತಾರೆ.
ಈ ವಾಹನಗಳಲ್ಲಿ ಕನಿಷ್ಠ ಸೌಕರ್ಯವೇ ಇರುವುದಿಲ್ಲ. ಸುರಕ್ಷತೆಯೂ ಇರುವುದಿಲ್ಲ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ.ಇತ್ತೀಚಿನ ದಿನಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ವಾಹನಗಳು ಬಂದಿದ್ದು, ಒಂದು ವೇಳೆ ಅಪಘಾತ ಸಂಭವಿಸಿದರೆ ಏರ್ಬ್ಯಾಗ್ನಿಂದ ಪ್ರಾಣ ಉಳಿಸಿಕೊಳ್ಳಬಹುದೆಂದು ಪೊಲೀಸ್ ಅಧಿಕಾರಿಯೊಬ್ಬರು ತಮ ಅಭಿಪ್ರಾಯವನ್ನು
ಹಂಚಿಕೊಂಡಿದ್ದಾರೆ.