ಬೆಳಗಾವಿ,ಜ.21- ಬೆಂಗಳೂರಿನ ವಿಧಾನಸೌಧದ ಮುಂದಿರುವಂತೆಯೇ ಬೆಳಗಾವಿಯ ಸುವರ್ಣಸೌಧದ ಆವರಣದಲ್ಲೂ ಸುಮಾರು 27 ಅಡಿ ಎತ್ತರದ ಮಹಾತ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಯಿತು.
ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಚರಕವನ್ನು ತಿರುಗಿಸುವ ಮೂಲಕ ಸುವರ್ಣಸೌಧದ ಮುಂದೆ ಸ್ಥಾಪಿಸಲಾಗಿರುವ ಮಹಾತಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದೇ ವೇಳೆ ಬಣ್ಣದೋಕುಳಿಗಳ ಸಿಡಿಮದ್ದಿನ ಪ್ರದರ್ಶನ ಆಕರ್ಷಣೀಯವಾಗಿತ್ತು.
ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ನಿರ್ಮಿಸಿರುವ ಮಾದರಿಯಲ್ಲೇ ಸುವರ್ಣ ಸೌಧದ ಆವರಣದಲ್ಲೂ ಗಾಂಧಿ ಪ್ರತಿಮೆ ನಿರ್ಮಿಸಲಾಗಿದ್ದು, ನನ್ನ ಜೀವನವೇ ನನ್ನ ಸಂದೇಶ ಎಂಬ ಒಕ್ಕಣಿಯನ್ನು ಅಳವಡಿಸಲಾಗಿದೆ.
ನೆಲಮಟ್ಟದಿಂದ 37 ಅಡಿ ಎತ್ತರದಲ್ಲಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ 20 ಟನ್ ಕಂಚು ಬಳಸಿ 27 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದೇ ವೇಳೆ ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸನಾನಿಸಿದರು.
ಪ್ರಿಯಾಂಕ ಗಾಂಧಿಯವರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಸನಾನಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಹೊರಟ್ಟಿಯವರನ್ನು ಪ್ರಿಯಾಂಕ ಗಾಂಧಿಯವರಿಗೆ ಪರಿಚಯಿಸಿ ಹಾಸ್ಯ ಚಟಾಕಿ ಹಾರಿಸಿದರು.
ಕಾರ್ಯಕ್ರಮಕ್ಕೆ ಎಲ್ಲರನ್ನೂ ಆಹ್ವಾನಿಸುವಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ನ ಧ್ವಜದ ಪ್ರತೀಕವಾಗಿರುವ ಹಾರವನ್ನು ತೊಡಿಸಲು ಮುಂದಾದರು.
ಸಿದ್ದರಾಮಯ್ಯ ಅದನ್ನು ಕೈಗಳಲ್ಲಿ ಸ್ವೀಕರಿಸಲು ಯತ್ನಿಸಿದಾಗ ಅದಕ್ಕೆ ಅವಕಾಶ ನೀಡದ ಡಿ.ಕೆ.ಶಿವಕುಮಾರ್ ನಸುನಗುತ್ತಲೇ ತಾವೇ ಹಾರ ಹಾಕಿ ಸ್ವಾಗತಿಸಿದರು.ಸಭಾಧ್ಯಕ್ಷ ಯು.ಟಿ.ಖಾದರ್ ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರಿಗೂ ಶಾಸಕರಿಗೆ ನೀಡಲಾಗಿರುವ ಗಂಡಭೇರುಂಡದ ಲಾಂಛನವನ್ನು ತೊಡಿಸಿದರು.
ಕಾರ್ಯಕ್ರಮದಲ್ಲಿ ಸಾದ್ವಿನಿ ಕೊಪ್ಪ ಅವರು ಉದಯವಾಗಲಿ ಚೆಲುವ ಕನ್ನಡ ನಾಡು ಹಾಡನ್ನು ಹಾಡಿದರು. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧಿವೇಶನದಲ್ಲಿ ಗಂಗೂಬಾಯಿ ಹಾನಗಲ್ ಅವರು ಈ ಹಾಡನ್ನು ಹಾಡುವ ಮೂಲಕ ಕರ್ನಾಟಕ ಏಕೀಕರಣಕ್ಕೆ ಚಾಲನೆ ನೀಡಿದ್ದನ್ನು ಸರಿಸಿಕೊಂಡರು.