Friday, November 22, 2024
Homeರಾಷ್ಟ್ರೀಯ | Nationalಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 27ಕ್ಕೂ ಹೆಚ್ಚು ಮಂದಿ ಸಾವು..!

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 27ಕ್ಕೂ ಹೆಚ್ಚು ಮಂದಿ ಸಾವು..!

ಹತ್ರಾಸ್‌. ಜು.2 :ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಮಂಗಳವಾರ ಭೋಲೆ ಬಾಬಾ ಸತ್ಸಂಗ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಲ್ತುಳಿತ ಉಂಟಾಗಿ, ಇದರಿಂದ ಸದ್ಯ 27 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನು ಇದುವರೆಗೆ ಸಾವನ್ನಪ್ಪಿದವರಲ್ಲಿ ಹತ್ರಾಸ್ ಮತ್ತು ಇಟಾಹ್ ನಿವಾಸಿಗಳು ಸೇರಿದ್ದಾರೆ ಎಂದು ಹೇಳಲಾಗ್ತಿದೆ. ಸತ್ತವರನ್ನು ಅಲಿಘರ್ ಮತ್ತು ಇಟಾಹ್‌ಗೆ ಕರೆದೊಯ್ಯಲಾಗಿದ್ದು, ಮೃತರಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಕೂಡ ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಲ್ರೈ ಗ್ರಾಮದಲ್ಲಿ ನಡೆದ ಸತ್ಸಂಗದಲ್ಲಿ ಈ ಘಟನೆ ನಡೆದಿದೆ ಎಂದು ಇಟಾಹ್‌ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಜನದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಸಿಕಂದರ ರಾವ್ ಪೊಲೀಸ್ ಠಾಣೆ ಎಸ್‌ಎಚ್‌ಒ ಆಶಿಶ್ ಕುಮಾರ್ ಅವರು ತಿಳಿಸಿದ್ದಾರೆ.

ಹತ್ರಾಸ್‌ನ ಸಿಕಂದರ್‌ರಾವ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಸ್ಥಳೀಯ ಸ್ವಾಮೀಜಿ ಒಬ್ಬರ ಸತ್ಸಂಗ ಏರ್ಪಾಡಾಗಿತ್ತು. ಹತ್ರಾಸ್‌ ಮಾತ್ರವಲ್ಲದೇ ಅಕ್ಕಪಕ್ಕದ ಭಾಗಗಳಿಂದಲೂ ಹೆಣ್ಣು ಮಕ್ಕಳ ಸಹಿತ ಹಲವರು ಸೇರಿದ್ದರು. ಈ ವೇಳೆ ಸ್ವಾಮೀಜಿ ಅವರಿಗೆ ಸನ್ಮಾನ ಇದೆ ಎನ್ನುವ ಮಾಹಿತಿಯನ್ನೂ ನೀಡಲಾಗಿದೆ. ಸತ್ಸಂಗ ಆಯೋಜಿಸಿದ್ದ ಸಭಾಂಗಣ ಸಣ್ಣದಾಗಿತ್ತು. ಅಲ್ಲಿಯೇ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಮಕ್ಕಳೊಂದಿಗೆ ಬಂದಿದ್ದ ಹೆಣ್ಣುಮಕ್ಕಳು, ಹಿರಿಯರು ಒಳಗೆ ಸೇರಿದ್ದರು. ಈ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆದಿದೆ. ಆಗ ಅಲ್ಲಿದ್ದವರು ಹೊರಕ್ಕೆ ಬರಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ.

ಕಾರ್ಯಕ್ರಮ ಆಯೋಜಿಸಿದ್ದ ಸಂಘಟಕರಿಗೂ ಜನ ಎದ್ದು ಹೋಗುವುದನ್ನು ತಡೆಯಲು ಆಗಿಲ್ಲ. ಮಕ್ಕಳು ಕಾಲ್ತುಳಿತಕ್ಕೆ ಸಿಲುಕಿದ್ದು, ಮಹಿಳೆಯರು ಉಸಿರಾಟ ಸಮಸ್ಯೆಯಿಂದ ಕುಸಿದು ಬಿದ್ದಿದ್ದಾರೆ, ಕೂಡಲೇ ಕೆಲವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಕೆಲವರಂತೂ ಸತ್ಸಂಗ ನಡೆದ ಭವನದ ಹೊರ ಭಾಗದಲ್ಲಿಯೇ ಬಿದ್ದು ಮೃತಪಟ್ಟಿರುವುದು ಕರುಳು ಹಿಂಡುವ ಹಾಗಿತ್ತು. ಮೃತಪಟ್ಟ ದೇಹಗಳನ್ನು ಬಸ್‌, ಕಾರುಗಳ ಮೂಲಕ ಸ್ಥಳೀಯ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಯಿತು.

ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು ಅವರನ್ನೂ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳು,. ಇಬ್ಬರು ಪುರುಷರು ಹಾಗೂ ಉಳಿದವರೆಲ್ಲಾ ಮಹಿಳೆಯರೇ.

ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಉಮೇಶ್‌ ಕುಮಾರ್‌ ತ್ರಿಪಾಠಿ ಅವರ ಪ್ರಕಾರ, ನಗರದಲ್ಲಿ ಕಾಲ್ತುಳಿತ ಸಂಭವಿಸಿ ಹಲವರು ಮೃತಪಟ್ಟಿದ್ದಾರೆ. ಕೆಲವರು ಅಸ್ವಸ್ಥಗೊಂಡಿದ್ಧಾರೆ ಎನ್ನುವ ಮಾಹಿತಿ ದೊರೆಯಿತು. ಗಾಯಾಳುಗಳಿಗೆ ಚಿಕಿತ್ಸೆ ನಡೆದಿದೆ. ಮೃತರ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ನೀಡಲಾಗುತ್ತದೆ ಎಂದು ಹೇಳಿದ್ಧಾರೆ.

ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದು, ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

RELATED ARTICLES

Latest News