ಬೆಂಗಳೂರು,ಏ.13- ರಾಜ್ಯದ 2ನೇ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆಯಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಮೊದಲ ದಿನ 41 ಅಭ್ಯರ್ಥಿಗಳು 57 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ದಾವಣಗೆರೆ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ತಲಾ 5, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ಬಿಜಾಪುರ ಕ್ಷೇತ್ರಗಳಲ್ಲಿ ತಲಾ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕೋಡಿ, ಬಾಗಲಕೋಟೆ, ಗುಲ್ಬರ್ಗ ಕ್ಷೇತ್ರಗಳಲ್ಲಿ ತಲಾ ಮೂರು ಮಂದಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರೆ, ಬೀದರ್‍ನಲ್ಲಿ ಇಬ್ಬರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಬೆಳಗಾವಿ, ರಾಯಚೂರು, ಹಾವೇರಿ, ಧಾರವಾಡ ಕ್ಷೇತ್ರಗಳಲ್ಲಿ ತಲಾ ಒಬ್ಬರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.
41 ಅಭ್ಯರ್ಥಿಗಳ ಪೈಕಿ 37 ಪುರುಷರು, ನಾಲ್ವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. 14 ಪಕ್ಷೇತರರು, 20 ಮಂದಿ ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ.ಬಿಎಸ್‍ಪಿ 2, ಎಎಪಿ 1, ಕಾಂಗ್ರೆಸ್ 11, ಬಿಜೆಪಿಯ ಅಭ್ಯರ್ಥಿಗಳಿಂದ 9 ನಾಮಪತ್ರ ಸಲ್ಲಿಕೆಯಾಗಿವೆ.
ಇಂದು ಮತ್ತು ನಾಳೆ ರಜಾ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಕೆಯಾಗುವುದಿಲ್ಲ. ಸೋಮವಾರದಿಂದ ರಾಜಕೀಯ ಪಕ್ಷಗಳ ಹಾಗೂ ಇತರೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಜೋರಾಗಿ ನಡೆಯಲಿದೆ.
ಈ ಹಂತದಲ್ಲಿ ನಾಮಪತ್ರ ಸಲ್ಲಿಸಲು ಏ.19 ಕಡೆಯ ದಿನವಾಗಿದೆ. ಸುರಪುರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಯಕ್ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ.