ಮಧ್ಯ ಪ್ರದೇಶ, ಸೆ.20- ಕಾರಿನ ಚಕ್ರ ಸ್ಫೋಟಗೊಂಡು ನಿಯಂತ್ರಣ ಕಳೆದುಕೊಂಡ ಕಾರು ಹೆದ್ದಾರಿ ಬಳಿಯ ಬಾವಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾಧುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ಸಂಭವಿಸಿದೆ.
ಘಟನೆ ಕುರಿತು ಮಾಹಿತಿ ನೀಡಿದ ಅಧಿಕಾರಿ ಮುಖೇಶ್ ದ್ವಿವೇದಿ ಅವರು, ಕಾರಿನಲ್ಲಿ 7 ಮಂದಿ ಸಾಧುಗಳು ಚಿತ್ರಕೂಟದಿಂದ ಬೇತುಲ್ ಕಡೆಗೆ ಪ್ರಯಾಣ ಬೆಳೆಸುತ್ತಿದ್ದರು.ಈ ವೇಳೆ ಕಾರು ಚಿಂದ್ವಾರದ ಬೇತುಲ್ ರಸ್ತೆಗೆ ಬರುತ್ತಿದ್ದಂತೆಯೇ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ಅಲ್ಲೇ ಪಕ್ಕದಲ್ಲಿದ್ದ ಬಾವಿಗೆ ಬಿದ್ದಿದೆ.
ಘಟನೆಯಲ್ಲಿ ಮೂವರು ಸಾಧುಗಳು ಸ್ಥಳದಲ್ಲೇ ಮೃತಪಟ್ಟರೆ, ಮೂವರನ್ನು ರಕ್ಷಣೆ ಮಾಡಲಾಗಿದೆ. ಮತ್ತೊಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.