ರಾಯ್‌ಪುರ, ಸೆ.1- ಅಬಕಾರಿ ಇಲಾಖೆಯ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆ ವೇಳೆ ಮೂವರು ಅಭ್ಯರ್ಥಿಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಜಾರ್ಖಂಡ್‌ನ ಪಲಾಮು ಜಿಲ್ಲೆಯಲ್ಲಿ ನಡೆದಿದೆ.
ಕಾನ್‌ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಯ ವೇಳೆ ಮೂರ್ಛೆ ಹೋದ 25 ಅಭ್ಯರ್ಥಿಗಳ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಅವರನ್ನು ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಅಭ್ಯರ್ಥಿಗಳು ಪಲಾಮು ಜಿಲ್ಲೆಯ ಮೇದಿನಿನಗರದಲ್ಲಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರೆ, ಒಬ್ಬರು ರಾಂಚಿಯ ರಿಮ್ಸ್‌ನಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಮಣಿಭೂಷಣ್ ಪ್ರಸಾದ್ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಉಸಿರಾಟದ ತೊಂದರೆಯಿಂದ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ಆರ್.ಕೆ.ರಂಜನ್ ತಿಳಿಸಿದ್ದಾರೆ. ಮೃತಪಟ್ಟವರನ್ನು ಅಮರೇಶ್ ಕುಮಾರ್ (20), ಅರುಣ್ ಕುಮಾರ್ (25) ಮತ್ತು ಪ್ರದೀಪ್ ಕುಮಾರ್ (25) ಎಂದು ಗುರುತಿಸಲಾಗಿದೆ.
ಪಲಾಮು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸುವುದು ಸೇರಿದಂತೆ ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಸುಮಾರು 100 ಅಭ್ಯರ್ಥಿಗಳು ಇಲ್ಲಿಯವರೆಗೆ ಪ್ರಜ್ಞಾಹೀನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.9ರವರೆಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏತನಧ್ಯೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ವಿಷಯದ ಬಗ್ಗೆ ತಕ್ಷಣ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಸಿಲಿನ ಝಳದಲ್ಲಿ ಓಡಿದ್ದರಿಂದ ಹಲವು ಅಭ್ಯರ್ಥಿಗಳು ಮೂರ್ಛೆ ಹೋಗುತ್ತಿದ್ದಾರೆ. ಒಂದು ವಾರದ ಹಿಂದೆ, ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಜದುಗೋರಾದಲ್ಲಿ ಗಿರಿದಿಹ್‌ನ ಕೇಶ್ವರಿ ನಿವಾಸಿ ಅಭ್ಯರ್ಥಿಯೊಬ್ಬರು ರೇಸ್‌ನಲ್ಲಿ ಸಾವನ್ನಪ್ಪಿದ್ದರು. ಇನ್ನು ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿರುವ ಬಗ್ಗೆ ವರದಿಯಾಗಿದೆ.