ಮಂಡ್ಯ, ಫೆ.17- ಬಾಲಕನೊಬ್ಬ ಆಟವಾಡುವಾಗ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ನಡೆದಿದೆ. ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದೆ. ಗುಂಡು ತಗುಲಿದ ಪರಿಣಾಮ ಮಗುವಿನ ಹೊಟ್ಟೆ ಛಿದ್ರವಾಗಿ ಸಾವನ್ನಪ್ಪಿದೆ.
ಬಾಲಕಕೋಳಿ ಫಾರಂನಲ್ಲಿ ಭದ್ರತೆಗಾಗಿ ಒಂದು ಅಸಲಿ ಗನ್ ಇಡಲಾಗಿತ್ತು. ಅದು ಸಜೀವ ಗುಂಡುಗಳಿಂದ ಲೋಡೆಡ್ ಆಗಿತ್ತು. ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕ ದಂಪತಿ ಇಲ್ಲೇ ಕೂಲಿ ಕಾರ್ಮಿಕರಾಗಿದ್ದು, 13 ವರ್ಷದ ಬಾಲಕ ಸುದೀಪ್ ದಾಸ್‌ನೊಂದಿಗೆ 3 ವರ್ಷದ ಮಗುವನ್ನು ಆಟವಾಡಲು ಬಿಟ್ಟು ಕೆಲಸಕ್ಕೆ ಹೋಗಿದ್ದರು.
ಈ ವೇಳೆ ಬಾಲಕ ಸುದೀಪ್, ಮೇಲೆ ಇದ್ದ ಗನ್ ತೆಗೆದುಕೊಂಡು ಕಳ್ಳ-ಪೊಲೀಸ್ ಆಟ ಆಡೋಣ ಎನ್ನುತ್ತಾ 3 ವರ್ಷದ ಮಗುವಿನ ಮೇಲೆ ಶೂಟ್ ಮಾಡಿದ್ದಾನೆ. ಈ ಆಕಸ್ಮಿಕ ಫೈರಿಂಗ್ ಮಗುವಿನ ಹೊಟ್ಟೆ ಸೀಳಿದೆ. ಅಲ್ಲೇ ಅಭಿಷೇಕ್ ತಾಯಿ ಲಿಪಿಕಾ ಇದ್ದು ಅವರಿಗೂ ಗಾಯವಾಗಿದೆ.
ಆಸ್ಪತ್ರೆಗೆ ಕರೆದೊಯ್ದರೂ ಫಲಿಸದ ಚಿಕಿತ್ಸೆ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಯಿತು. ಗನ್‌ನಿಂದ ಫೈರ್ ಆದ ಗುಂಡು ಮಗುವಿನ ಹೊಟ್ಟೆ ಸೀಳಿದ್ದರಿಂದ ಹೊಟ್ಟೆಯಲ್ಲಿದ್ದ ಕರಳು ಹೊರಗೆ ಬಂದಿತ್ತು. ಆದರೂ, ಉಸಿರಾಡುತ್ತಿದ್ದ ಮಗುವಿನ ಕರಳುಗಳನ್ನು ಹೊಟ್ಟೆಯ ಮೇಲೆ ಟವೆಲ್‌ನಿಂದ ಕಟ್ಟಿಕೊಂಡು ಆಸ್ಪತ್ರೆಗೆ
ಕರೆದೊಯ್ಯಲಾಯಿತು. ಆದರೆ, ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಗು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಗನ್ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.