ನವದೆಹಲಿ,ಅ.18- ಕೆಂಪು ಭಯೋತ್ಪಾದನೆಯಲ್ಲಿ ತೊಡಗಿರುವ ಮಾವೋವಾದಿ ನಕ್ಸಲರನ್ನು ನಿರ್ಮೂಲನೆ ಮಾಡಲು ನಮ್ಮ ಸರ್ಕಾರ ದೃಢಸಂಕಲ್ಪ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನಕ್ಸಲಿಸಂ ದೇಶದ ವಿರುದ್ಧದ ಪಾಪ ಎಂದು ಗುಡುಗಿರುವ ಅವರು ಸರ್ಕಾರದ ಕ್ರಮಗಳಿಂದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 125 ರಿಂದ 11 ಕ್ಕೆ ಇಳಿದಿದ್ದು, 300ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ ಎಂದು ಹೇಳಿದ್ದಾರೆ.
ಮಾವೋವಾದಿ ಉಗ್ರವಾದವು ಭಾರತದ ಯುವಕರಿಗೆ ಅನ್ಯಾಯ ಮಾಡಿದೆ ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವುದೇ ತಮ್ಮ ಸರ್ಕಾರದ ದೃಢಸಂಕಲ್ಪ ಎಂದು ಹೇಳಿದ್ದಾರೆ.ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆಯ ವಿರುದ್ಧ ಭಾರತ ಬಲವಾದ ನಿಲುವನ್ನು ತೆಗೆದುಕೊಂಡಿದೆ.
ಪಹಲ್ಗಾಮ್‌ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ್ದಕ್ಕಾಗಿ ಪಾಕಿಸ್ತಾನ ಹಾಗೂ ಭಯೋತ್ಪಾದಕರಿಗೆ ಆಪರೇಷನ್ ಸಿಂಧೂರ್ ಮೂಲಕ ಉತ್ತರ ನೀಡಿದ್ದೇವೆ. ದೇಶವು ಗಡಿಯಾಚೆಗಿನ ಬೆದರಿಕೆಗಳನ್ನು ನಾಶ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಭಾರತವು ಈಗ ಚಿಪ್‌ಗಳಿಂದ ಹಿಡಿದು ಹಡಗುಗಳವರೆಗೆ ಎಲ್ಲವನ್ನೂ ತಯಾರಿಸುತ್ತಿದೆ. ಸ್ವಾವಲಂಬನೆ ಮೂಲಕ ಭಾರತ ಪ್ರಗತಿ ಸಾಧಿಸುತ್ತಿದೆ. ಜತೆಗೆ ಈಗಾಗಲೇ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ನಡುವೆ ಇಡೀ ಮಾವೋವಾದಿ ಪರಿಸರ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ, ಕಾಂಗ್ರೆಸ್ ವಿರುದ್ಧವು ಕೂಡ ಟೀಕೆ ಮಾಡಿದರು, ಹಿಂದಿನ ಯುಪಿಎ ಸರ್ಕಾರವೂ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿದೆ. ವಿದೇಶಿ ಶಕ್ತಿಗಳ ಜತೆಗೆ ಭಾರತದ ವಿರುದ್ಧ ಕೈಜೋಡಿಸಿತ್ತು. ಕಾಂಗ್ರೆಸ್ ಬಲವಂತದ ರಾಜಕೀಯವನ್ನು ಮಾಡುತ್ತಿತ್ತು. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಹಾನಿಯಾಗಿದೆ ಎಂದು ಹೇಳಿದರು.
ಈಗಾಗಲೇ 75 ಗಂಟೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸರ್ಕಾರ ನೀಡಿದ ಅಂತಿಮ ಸೂಚನೆಯ ನಂತರ 308 ಕ್ಕೂ ಹೆಚ್ಚು ಕಟ್ಟಾ ಮಾವೋವಾದಿ ಕಾರ್ಯಕರ್ತರು ಶರಣಾಗತಿಯಾಗಿದ್ದಾರೆ. ಇನ್ನು ದೇಶದಲ್ಲಿರುವ ಅನೇಕ ಜಿಲ್ಲೆಗಳು ಮಾವೋವಾದಿ ಪೀಡಿತದಿಂದ ಮುಕ್ತವಾಗುತ್ತಿದೆ. ಸುಮಾರು 11 ವರ್ಷಗಳ ಹಿಂದೆ 125 ಜಿಲ್ಲೆಗಳು ಮಾವೋವಾದಿ ಹಿಂಸಾಚಾರಕ್ಕೆ ಒಳಗಾಗಿತ್ತು. ಆದರೆ ಇದೀಗ ಇದು 11 ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.