Friday, November 22, 2024
Homeರಾಜ್ಯಚುನಾವಣಾ ಅಕ್ರಮ : ರಾಜ್ಯದಲ್ಲಿ ಈವರೆಗೆ 307.61 ಕೋಟಿ ಮೊತ್ತದ ನಗದು, ಚಿನ್ನಾಭರಣ ಜಪ್ತಿ

ಚುನಾವಣಾ ಅಕ್ರಮ : ರಾಜ್ಯದಲ್ಲಿ ಈವರೆಗೆ 307.61 ಕೋಟಿ ಮೊತ್ತದ ನಗದು, ಚಿನ್ನಾಭರಣ ಜಪ್ತಿ

ಬೆಂಗಳೂರು,ಏ.13- ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿರುವ ಹಿನ್ನೆಲೆಯಲ್ಲಿ ಜಪ್ತಿಯಾಗುತ್ತಿರುವ ನಗದು, ಚಿನ್ನಾಭರಣ, ಮದ್ಯ, ಉಚಿತ ಉಡುಗೊರೆಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ನಿನ್ನೆಯವರೆಗೆ ರಾಜ್ಯದಲ್ಲಿ 307.61 ಕೋಟಿ ಮೊತ್ತದ ನಗದು, ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸ್ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, 81.33 ಕೋಟಿ ರೂ. ಮೌಲ್ಯದ ನಗದು, ಮದ್ಯ, ಡ್ರಗ್ಸ್, ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಅಬಕಾರಿ ಇಲಾಖೆಯವರು 146.70 ಕೋಟಿ ರೂ. ಮೌಲ್ಯದ ಮದ್ಯ, ಡ್ರಗ್ಸ್ ವಶಪಡಿಸಿಕೊಂಡಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು 13.60 ಕೋಟಿ ರೂ. ಮೌಲ್ಯದ ನಗದು ಚಿನ್ನ ಹಾಗೂ ವಜ್ರದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು 65.98 ಕೋಟಿ ರೂ. ಮೌಲ್ಯದ ಚಿನ್ನ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 46.01 ಕೋಟಿ ರೂ. ನಗದು, 147.03 ಕೋಟಿ ರೂ. ಮೌಲ್ಯದ ಮದ್ಯ, 9.75 ಕೋಟಿ ರೂ. ಮೌಲ್ಯದ ಡ್ರಗ್ಸ್, 24.38 ಕೋಟಿ ರೂ. ಮೌಲ್ಯದ ಚಿನ್ನ, 69 ಲಕ್ಷ ರೂ. ಮೌಲ್ಯದ ಬೆಳ್ಳಿ, 9 ಲಕ್ಷ ರೂ. ಮೌಲ್ಯದ ವಜ್ರ, 7.73 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳು, 71.94 ಕೋಟಿ ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗದು, ಮದ್ಯ, ಡ್ರಗ್ಸ್, ಉಚಿತ ಉಡುಗೊರೆ ಹಾಗೂ ಬೆಲೆ ಬಾಳುವ ಲೋಹಗಳಿಗೆ ಸಂಬಂಧಿಸಿದಂತೆ 1587 ಎಫ್‍ಐಆರ್‍ಗಳನ್ನು ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸರು ದಾಖಲಿಸಿದ್ದಾರೆ. 1,214 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅಬಕಾರಿ ಇಲಾಖೆ ಘೋರ ಅಪರಾಧದಡಿಯಲ್ಲಿ 2,002 ಪ್ರಕರಣಗಳನ್ನು ದಾಖಲಿಸಲಾಗಿದೆ. ಪರವಾನಗಿ ಉಲ್ಲಂಘನೆಯಡಿಯಲ್ಲಿ 2,531 ಪ್ರಕರಣ, ಎನ್‍ಡಿಪಿಎಸ್ ಅಡಿಯಲ್ಲಿ 119 ಪ್ರಕರಣ ಹಾಗೂ ಅಬಕಾರಿ ಕಾಯ್ದೆ ಉಲ್ಲಂಘನೆಯಡಿಯಲ್ಲಿ 12,766 ಪ್ರಕರಣಗಳನ್ನು ದಾಖಲಿಸಲಾಗಿದೆ.

ಕೊಳ್ಳೇಗಾಲ ಪೊಲೀಸ್ ಠಾಣೆ ತಂಡದವರು 1,02,90,469 ರೂ. ಮೌಲ್ಯದ 2.170 ಕೆ.ಜಿ. ಚಿನ್ನದ ಆಭರಣ, ಸ್ಥಿರ ಕಣ್ಗಾವಲು ತಂಡದವರು ದಾವಣಗೆರೆ ಜಿಲ್ಲೆಯ ಲೋಕಿಕೆರೆ ಚೆಕ್ ಪೋಸ್ಟ್ ನಲ್ಲಿ 12,50,45,115 ರೂ. ಮೌಲ್ಯದ 20.874 ಕೆ.ಜಿ. ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News