ಬೆಂಗಳೂರು,ಜೂ.5- ಹಿಮಾಲಯ ತಪ್ಪಲಿನ ಉತ್ತರಕಾಶಿ ಹಾಗೂ ತೆಹರಿ ಜಿಲ್ಲೆಯ ಗಡಿಭಾಗದಲ್ಲಿ ಟ್ರೆಕ್ಕಿಂಗ್‌ನಲ್ಲಿ ಭಾಗಿಯಾಗಿದ್ದ ಕರ್ನಾಟಕದ 18 ಮಂದಿ ಸೇರಿ, 22 ಜನ ಮಳೆ, ಮಂಜು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರಲ್ಲಿ 5 ಮಂದಿ ಮೃತಪಟ್ಟಿದ್ದಾರೆ.
ಈ ಘಟನೆ ನಿನ್ನೆ ಮಧ್ಯಾಹ್ನ ಬೆಳಕಿಗೆ ಬಂದಿದ್ದು, ಸಂಕಷ್ಟಕ್ಕೆ ಸಿಲುಕಿದವರ ರಕ್ಷಣೆಗೆ ರಾಜ್ಯಸರ್ಕಾರ ಧಾವಿಸಿದೆ. ಸಚಿವ ಕೃಷ್ಣಭೈರೇಗೌಡ ಉತ್ತರಾಖಂಡ್‌ಗೆ ತೆರಳಿ ಪರಿಹಾರ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ನಿನ್ನೆ ರಾತ್ರಿಯಿಂದ ನಡೆದ ಪ್ರಯತ್ನಗಳ ಪರಿಣಾಮ ಇಂದು ಬೆಳಿಗ್ಗೆ ವಾಯುಸೇನೆಯ ಎರಡು ಹೆಲಿಕಾಪ್ಟರ್‌ಗಳು ಹುಡುಕಾಟ ನಡೆಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರಿಂದಾಗಿ ಕರ್ನಾಟಕದ ಹಲವಾರು ಮಂದಿಯನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗಿದೆ.
ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸೌಮ್ಯ ವಿವೇಕ್ (37), ವಿನಯ್ ಕೃಷ್ಣಮೂರ್ತಿ (47), ಶಿವಜ್ಯೋತಿ, ಸುಧಾಕರ್, ಬಿ.ಎನ್.ನಾಯ್ಡು (64), ಸತಿ ಗುರುರಾಜ್ (40), ಸೀನಾ (48) ಸೇರಿದಂತೆ ಹಲವರನ್ನು ರಕ್ಷಿಸಲಾಗಿದೆ.
ಕರ್ನಾಟಕದ ಸುಜಾತ (52), ಪದಿನಿ ಹೆಗಡೆ (35), ಚೈತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (55), ಅನಿತಾ (61), ಆಶಾ ಸುಧಾಕರ್ (72), ಪದನಾಭ್ ಕೆಪಿಎಸ್ (50), ವಿನಾಯಕ್ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. 13 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್ ಈ ಸಂಜೆಯೊಂದಿಗೆ ಮಾತನಾಡಿ, ಬೆಂಗಳೂರಿನ 22 ಮಂದಿ ಚಾರಣಕ್ಕೆ ತೆರಳಿದ್ದು, ನಿನ್ನೆ ಮಧ್ಯಾಹ್ನ ಹವಾಮಾನ ವೈಪರೀತ್ಯದಿಂದ ತೊಂದರೆಗೆ ಸಿಲುಕಿದ್ದಾರೆ. ನಿನ್ನೆ ಸಂಜೆಯಿಂದ ಸ್ಥಳೀಯರು ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ರಕ್ಷಣಾ ಕಾರ್ಯಕ್ಕೆ ಪ್ರಯತ್ನ ಮಾಡಿದ್ದಾರೆ.
ಸಂಜೆ ಹಾಗೂ ರಾತ್ರಿ ವೇಳೆ ತೀವ್ರ ಹಿಮಪಾತ ಹಾಗೂ ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಇಂದು ಬೆಳಿಗ್ಗೆ ವಾಯುಸೇನೆಯ ಹೆಲಿಕಾಪ್ಟರ್ ಬಳಕೆ ಮಾಡಿದ್ದು, ಹಲವರನ್ನು ರಕ್ಷಿಸಲಾಗಿದೆ. ಐದು ಮಂದಿ ಮೃತಪಟ್ಟಿರುವ ಮಾಹಿತಿ ಬಂದಿದೆ. ಉಳಿದವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದರು.
ಅಪಾಯಕಾರಿ ಚಾರಣ :
ಮನೇರಿಯಾದ ಹಿಮಾಲಯ ವೀವ್ ಟ್ರೆಕ್ಕಿಂಗ್ ಸಂಸ್ಥೆ ಆಯೋಜಿಸಿದ್ದ ಟ್ರೆಕ್ಕಿಂಗ್‌ನಲ್ಲಿ ಒಟ್ಟು 22 ಮಂದಿ ಭಾಗವಹಿಸಿದ್ದರು. ಅವರಲ್ಲಿ ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಹಾಗೂ ಮೂರು ಜನ ಸ್ಥಳೀಯರು ಭಾಗವಹಿಸಿದ್ದರು ಎಂದು ಉತ್ತರಕಾಶಿಯ ಜಿಲ್ಲಾಧಿಕಾರಿ ಮೆಹರ್ಬಾನ್ ಸಿಂಗ್ ಬಿಶತ್ ತಿಳಿಸಿದ್ದಾರೆ.
ಮೇ 29 ರಿಂದ ಉತ್ತರಕಾಶಿಯಿಂದ ಆರಂಭಗೊಂಡಿದ್ದ ಟ್ರೆಕ್ಕಿಂಗ್ 35 ಕಿ.ಮೀ. ದೀರ್ಘ ಪ್ರಯಾಣವಾಗಿದ್ದು, ಮಲ್ಲಾ-ಸಿಲ್ಲಾ-ಖುಷ್ಕಲ್ಯಾಣ್ ಸಹಸ್ತ್ರತಲ್ ಮಾರ್ಗವಾಗಿ ಮುಂದುವರೆದು ಜೂನ್ 7 ರಂದು ಅವರು ಮರಳಿ ಬರಬೇಕಿತ್ತು. ಆದರೆ ಹವಾಮಾನ ವೈಪರೀತ್ಯ, ಭಾರಿ ಮಳೆ, ಮಂಜು ಕವಿದ ವಾತಾವರಣದಿಂದಾಗಿ ಚಾರಣಿಗರು ಸಹಸ್ತ್ರತಲ್‌ನ ಆಲ್ಫೆನ್‌ಲೇಕ್‌ನ ಹಾದಿಯಲ್ಲಿ ದಿಕ್ಕು ತಪ್ಪಿದ್ದಾರೆ.
ವಿಷಯ ತಿಳಿದ ಜಿಲ್ಲಾಡಳಿತ ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದು, ವಾಯುಸೇನೆಯ 2 ಚೇತಕ್ ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡಿಕೊಂಡು ಹುಡುಕಾಟ ಆರಂಭಿಸಲಾಯಿತು ಎಂದು ಉತ್ತರಖಂಡ್‌ನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ರಂಜಿತ್ ಸಿನ್ಹಾ ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಎಸ್‌ಡಿಆರ್‌ಎಫ್ ದಳ, ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದಾರೆ.ಎಸ್ಪಿ ಅರ್ಪಣ್ ಯದುವಂಶಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು, ಡೆಹ್ರಾಡೂನ್‌ನಲ್ಲಿ ವಿಚಕ್ಷಣಾ ದಳಗಳನ್ನು ಸಜ್ಜುಗೊಳಿಸಲಾಗಿದೆ. ಉತ್ತರಕಾಶಿಯ ಜಿಲ್ಲಾಸ್ಪತ್ರೆ ಹಾಗೂ ಬಟವಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಸ್ಥಿತಿ ನಿಭಾಯಿಸಲು ಸಿದ್ಧಗೊಳಿಸಲಾಗಿದ್ದು, 14 ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಹಸ್ತ್ರತಲ್ 7 ಸರೋವರಗಳ ಸಮೂಹವಾಗಿದ್ದು, ಆಳವಾದ ಕಂದಕಗಳನ್ನು ಹೊಂದಿದೆ. ಪಾಂಡವರು ಈ ಸ್ಥಳದಿಂದ ಸ್ವರ್ಗಕ್ಕೆ ಹೋದರು ಎಂಬ ಪೌರಾಣಿಕ ಐತಿಹ್ಯವಿದೆ. ಸುಮಾರು 14,500 ಅಡಿಗೂ ಹೆಚ್ಚಿನ ಏರಿಳಿತಗಳ ಈ ಚಾರಣಕ್ಕೆ ಇದು ಸೂಕ್ತ ಸಮಯ ಅಲ್ಲ ಎಂದು ಹೇಳಲಾಗುತ್ತಿದೆ.ಅದರ ಹೊರತಾಗಿಯೂ ಖಾಸಗಿ ಸಂಸ್ಥೆ ಚಾರಣ ಆಯೋಜಿಸಿದ್ದು ಪ್ರಶ್ನಾರ್ಹವಾಗಿದೆ.