Monday, May 19, 2025
Homeರಾಜ್ಯತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 4 ಮಂದಿ ಬಲಿ

ತುಮಕೂರು ಜಿಲ್ಲೆಯಲ್ಲಿ ಕಲುಷಿತ ನೀರು ಕುಡಿದು 4 ಮಂದಿ ಬಲಿ

ಬೆಂಗಳೂರು,ಜೂ.13- ಕಲುಷಿತ ನೀರಿನ ಪ್ರಕರಣದಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಆಯಾ ಜಿಲ್ಲೆಗಳ ಜಿಲ್ಲಾಡಳಿತವನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ ನೀಡಿದ ಬಳಿಕವೂ ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರು ಮಲಿನಗೊಂಡು 4ಕ್ಕೂ ಹೆಚ್ಚು ಮಂದಿ ಜೀವಹಾನಿಯಾಗಿರುವ ಪ್ರಕರಣ ವರದಿಯಾಗಿದೆ.

ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರು ಸೇವಿಸಿ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಮಧುಗಿರಿ, ಕೊರಟಗೆರೆ, ತುಮಕೂರು ಹಾಗೂ ಬೆಂಗಳೂರಿನ ವಿವಿಧೆಡೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ ನಾಲ್ವರ ಜೀವಹಾನಿಯಾಗಿದೆ ಎಂದು ಹೇಳಲಾಗಿದೆ.

ಗ್ರಾಮಕ್ಕೆ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಜೆಸಿಬಿಯಲ್ಲಿ ಕೆಲಸ ಮಾಡುವಾಗ ಕುಡಿಯುವ ನೀರಿನ ಹಾಗೂ ತ್ಯಾಜ್ಯನೀರು ಹರಿದುಹೋಗುವ ಪೈಪ್‌ಗಳು ಹಾನಿಗೊಂಡಿವೆ.

ಈ ಸಂದರ್ಭದಲ್ಲಿ ಕಲುಷಿತ ನೀರು ಕುಡಿಯುವ ನೀರಿಗೆ ಮಿಶ್ರಣಗೊಂಡಿದೆ ಎಂದು ಹೇಳಲಾಗಿದೆ. ಚಿನ್ನೇನಹಳ್ಳಿಯಲ್ಲಿ ಜಾತ್ರೆಯ ಸಂಭ್ರಮವಿದ್ದು, ಕಲುಷಿತ ನೀರಿನಿಂದಾಗಿ 100 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ವಾಂತಿ-ಬೇಧಿಯಿಂದ ಬಳಲುತ್ತಿದ್ದವರ ಪೈಕಿ ಬಹಳಷ್ಟು ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಮೂರು ದಿನಗಳ ಹಿಂದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಬೇರೆ ಬೇರೆ ಕಡೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರೆಸಿದೆ.ಇಂದು ಬೆಳಿಗ್ಗೆ ತುಮಕೂರು ಆಸ್ಪತ್ರೆಯಲ್ಲಿ ಚಿಕ್ಕದಾಸಪ್ಪ (76), ಪೆದ್ದಣ್ಣ (75) ಎಂಬುವವರು ಮೃತಪಟ್ಟಿದ್ದಾರೆ.

ಬಾಲಕಿಯೊಬ್ಬಳು ಮಧುಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಹಾಗೂ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ತುಮಕೂರು ವರದಿ :
ಜಿಲ್ಲಾ ಉಸ್ತುವಾರಿ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಇಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಲುಷಿತ ನೀರು ಪ್ರಕರಣದ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಆಸ್ಪತ್ರೆಯಲ್ಲಿ ಚಿಕ್ಕದಾಸಪ್ಪ ಮತ್ತು ಪೆದ್ದಣ್ಣ ಅವರು ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಾಗಿರುವ ಜೀವಹಾನಿಯ ಬಗ್ಗೆ ಮಾಹಿತಿ ಪಡೆಯಲಾಗುವುದು. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಹೇಳಿದರು.

ಕುಡಿಯುವ ನೀರಿನ ವ್ಯವಸ್ಥೆಗೆ ಕಲುಷಿತ ನೀರು ಮಿಶ್ರಣಗೊಂಡಿದ್ದರಿಂದಾಗಿ ದುರಂತ ಸಂಭವಿಸಿದೆ. ಕರ್ತವ್ಯ ನಿರ್ಲಕ್ಷ್ಯಕ್ಕೆ ಸಂಬಂಧಪಟ್ಟಂತೆ ಪಿಡಿಒ ಹಾಗೂ ನೀರು ಸರಬರಾಜು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ತಾವು ನಾಳೆ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದು, ಇಡೀ ಜಿಲ್ಲೆಯ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಜಲಜೀವನ್‌ ಮಿಷನ್‌ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವುದಾಗಿ ಹೇಳಿದರು.

ಜಿಲ್ಲೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಚಿನ್ನೇನಹಳ್ಳಿ ಪ್ರಕರಣದಲ್ಲಿ ಚಿಕ್ಕ ಮಕ್ಕಳು, ಶಾಲೆಗೆ ಹೋಗುವ ಮಕ್ಕಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಲಾಗುತಿದ್ದು ಪೂರ್ತಿ ಗುಣಮುಖರಾದ ಬಳಿಕ ಮನೆಗೆ ಕಳುಹಿಸಲಾಗುವುದು ಎಂದರು.

RELATED ARTICLES

Latest News