ಬರ್ವಾನಿ, ಜು 21 (ಪಿಟಿಐ) ಮಧ್ಯಪ್ರದೇಶದ ಬರ್ವಾನಿಯ ಸರ್ಕಾರಿ ಹಾಸ್ಟೆಲ್‍ನಲ್ಲಿ ಉಳಿದುಕೊಂಡಿದ್ದ 40 ಕ್ಕೂ ಹೆಚ್ಚು ಹುಡುಗಿಯರಿಗೆ ವಾಂತಿ, ಬೇಧಿ ಮತ್ತು ಜ್ವರ ಕಾಣಿಸಿಕೊಂಡಿದೆ. ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಯಿತು, ಅವರಲ್ಲಿ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿವಾಲಿಯ ಕಸ್ತೂರ್ ಬಾ ಕನ್ಯಾ ಆಶ್ರಮದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ದೇವಯಾನಿ ಅಹರ್ವಾಲ್ ತಿಳಿಸಿದ್ದಾರೆ. ಸುಮಾರು 44 ಬಾಲಕಿಯರಲ್ಲಿ ವಾಂತಿ, ಬೇಧಿ, ಜ್ವರ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 10 ಮಂದಿಯನ್ನು ದಾಖಲಿಸಿ ಉಳಿದವರನ್ನು ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಡುಗಡೆ ಮಾಡಲಾಗಿದೆ.
10 ಮಂದಿಯಲ್ಲಿ ಐವರು ಬಾಲಕಿಯರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ವರದಿಗಾಗಿ ನಾವು ಕಾಯುತ್ತಿದ್ದೇವೆ. ಅವರು ಏಕೆ ಅನಾರೋಗ್ಯಕ್ಕೆ ಒಳಗಾದರು ಎಂಬುದು ವರದಿ ಬಂದ ನಂತರವಷ್ಟೇ ತಿಳಿದುಬರಲಿದೆ ಎಂದಿದ್ದಾರೆ. ಹಾಸ್ಟೆಲ್‍ನಿಂದ ನೀರು ಮತ್ತು ಆಹಾರದ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಲಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.