ಬೆಂಗಳೂರು, ಡಿ.18- ಮಂಡ್ಯ ನಗರದಲ್ಲಿ ಡಿ. 20ರಿಂದ 22ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ಅಧಿಕಾರಿಗಳೂ ಸೇರಿದಂತೆ ಒಟ್ಟು 4173 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಸಾಹಿತ್ಯ ಸಮೇಳನವನ್ನು ಸುಸೂತ್ರವಾಗಿ ನಡೆಯಲು ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಒಟ್ಟು 14 ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕರೆಸಿಕೊಳ್ಳಲಾಗುತ್ತದೆ.
ದಕ್ಷಿಣ ವಲಯದ ಡಿಐಜಿಪಿ ಅವರ ನೇತೃತ್ವದಲ್ಲಿ ನಾಲ್ವರು ಎಸ್ಪಿ, ಆರು ಮಂದಿ ಎಎಸ್ಪಿ, 21- ಡಿಎಸ್ಪಿ, 63- ಸಿಪಿಐ/ಪಿಐ, 190- ಪಿಎಸ್ಐ, 215- ಎಎಸ್ಐ, 1700- ಹೆಡ್ಕಾನ್ಸ್ಟೇಬಲ್/ ಕಾನ್ಸ್ಟೇಬಲ್, 165- ಮಹಿಳಾ ಹೆಡ್ಕಾನ್ಸ್ಟೇಬಲ್/ಕಾನ್ಸ್ಟೇಬಲ್, 1000 ಗೃಹ ರಕ್ಷಕರು, 12- ಕೆಎಸ್ಆರ್ಪಿ, 13- ಡಿಎಆರ್ ತುಕಡಿಗಳು, 2- ಕ್ಯೂಆರ್ಟಿ ಸ್ಪೈಕಿಂಗ್ ಪೋರ್ಸ್ಗಳು ಸೇರಿದಂತೆ ಒಟ್ಟು 4173 ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ.
ಸಮೇಳನದ ಪ್ರಮುಖ ಸ್ಥಳಗಳಾದ, ಮುಖ್ಯ ವೇದಿಕೆ, ಊಟದ ಸ್ಥಳ, ಪುಸ್ತಕ ಮಳಿಗೆ, ವಸ್ತು ಸಂಗ್ರಹಾಲಯ, ನೋಂದಣಿ ಸ್ಥಳಗಳು ಮುಂತಾದ ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿ ಅವುಗಳ ಮಾನಿಟರಿಂಗ್ ವ್ಯವಸ್ಥೆಯನ್ನು ಏರ್ಪಡಿಸಲಾಗಿರುತ್ತದೆ.ಸಮೇಳನದ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಸಂಚಾರ ನಿರ್ವಹಣೆ ಮಾಡಲು ಸಹಕಾರಿಯಾಗುವಂತೆ 5 ಡ್ರೋನ್ ಹಾಗೂ 21 ಹ್ಯಾಂಡಿ ಕ್ಯಾಮೆರಾಗಳನ್ನು ಬಳಸಲಾಗುತ್ತದೆ.
ಸಮೇಳನ ಸ್ಥಳದಲ್ಲಿ ಜನರಿಗೆ ಸಹಾಯವಾಗುವಂತೆ ಹಾಗೂ ಪಿಕ್ಪ್ಯಾಕೇಟ್, ಸರಗಳ್ಳತನ ಹಾಗೂ ಕಾಣೆಯಾಗುವ ಹಿರಿಯರು ಮತ್ತು ಮಕ್ಕಳ ಪತ್ತೆಯ ಬಗ್ಗೆ ಪೊಲೀಸ್ ಸಹಾಯವಾಣಿ ತೆರೆಯಲಾಗಿರುತ್ತದೆ.
ಮೂರು ದಿನಗಳ ಕಾಲ ಸಾರ್ವಜನಿಕರು ಸಮೇಳನಕ್ಕೆ ತಲುಪಲು ಅನುಕೂಲವಾಗುವಂತೆ ಸಂಚಾರ ಮಾರ್ಗಗಳ ವಿವರಗಳನ್ನು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸಲಾಗಿದ್ದು, 10 ಕಡೆಗಳಲ್ಲಿ ಪ್ರತ್ಯೇಕವಾಗಿ ಪಾರ್ಕಿಂಗ್ ವ್ಯವಸ್ಥೆ ಏರ್ಪಡಿಸಲಾಗಿರುತ್ತದೆ.
ಸಾಹಿತ್ಯ ಸಮೇಳನಕ್ಕೆ ಬರುವ ಎಲ್ಲಾ ಸಾರ್ವಜನಿಕರು, ಗಣ್ಯ ವ್ಯಕ್ತಿಗಳು, ಕವಿಗಳು, ವಿದ್ವಾಂಸರು ಹಾಗೂ ಸಾಹಿತ್ಯಾಸಕ್ತರುಗಳಿಗೆ ತೊಂದರೆಯಾಗದಂತೆ ಎಲ್ಲಾ ರೀತಿಯ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳಲಾಗಿರುತ್ತದೆ ಎಂದು ಮಂಡ್ಯ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಅವರು ತಿಳಿಸಿದ್ದಾರೆ.