ಬೆಂಗಳೂರು,ಮಾ.7– ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸಕ್ತ ಸಾಲಿನಲ್ಲಿ ಈ ಸಮುದಾಯಗಳಿಗೆ 42,018 ಕೋಟಿ ರೂ.ಗಳ ಅನುದಾನವನ್ನು ಎಸ್‌ಸಿಪಿ/ಟಿಎಸ್‌ಪಿ ಅಡಿ ಒದಗಿಸಲಾಗಿದೆ.
ಪರಿಶಿಷ್ಟ ಜಾತಿಯ ಉಪಯೋಜನೆಯಡಿ 29,992 ಕೋಟಿ ರೂ., ಬುಡಕಟ್ಟು ಉಪಯೋಜನೆಯಡಿ 12,026 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.ಪರಿಶಿಷ್ಟ ಜಾತಿ ಕಾಲೋನಿಗಳಲ್ಲಿ ಮೂಲಸೌಲಭ್ಯಕ್ಕೆ ಪ್ರಗತಿ ಕಾಲೋನಿ ಯೋಜನೆಯಡಿ 559 ಕೋಟಿ ರೂ. ಹಿಂದಿನ ವರ್ಷದ ಕಾಮಗಾರಿ ಪೂರ್ಣಗೊಳಿಸಲು 222 ಕೋಟಿ ರೂ. ಒದಗಿಸಲಾಗಿದೆ. ದಲಿತರ ಮೇಲಿನ ದೌರ್ಜನ್ಯ ತಡೆಗಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ 33 ಹೊಸ ಪೊಲೀಸ್ ಠಾಣೆಗಳನ್ನು ಪ್ರಾರಂಭಿಸಲಾಗಿದೆ.
ಎಸ್‌ಸಿ/ಎಸ್‌ಟಿ, ಓಬಿಸಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 31 ವಸತಿ ಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. 26 ಹೊಸ ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. 1292 ಕೋಟಿ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿಯ 40, ಪರಿಶಿಷ್ಟ ಪಂಗಡದ 7, ಹಿಂದುಳಿದ ವರ್ಗಗಳ 14 ವಸತಿ ಶಾಲೆಗಳೂ ಸೇರಿದಂತೆ ನಿವೇಶನ ಲಭ್ಯವಿರುವ 61 ಕಡೆ ಕ್ರೈಸ್ ವಸತಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಕ್ರೈಸ್ ವಸತಿ ಶಾಲೆಗಳಿಗೆ 213 ಕೋಟಿ ರೂ. ವೆಚ್ಚದಲ್ಲಿ ಅಗತ್ಯವಿರುವ ಡೆಸ್ಕ್, ಬೆಂಚು, ಪೀಠೋಪಕರಣ ಹಾಗೂ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ.238 ಕೋಟಿ ರೂ. ವೆಚ್ಚದಲ್ಲಿ 34 ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್‌್ಸನಲ್ಲಿ ಅಧ್ಯಯನ ಮಾಡಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್‌್ಸ ವಿವಿಗಳಲ್ಲಿ ಅಧ್ಯಯನಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ 1 ಕೋಟಿ ರೂ. ಡಾ. ಬಿ.ಆರ್.ಅಂಬೇಡ್ಕರ್ ಫೆಲೋಶಿಪ್ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ-ಯುವತಿಯರಿಗೆ ಫಾಸ್ಟ್ ಫುಡ್, ಟ್ರಕ್ ಟ್ರೈಲರ್, ಮೊಬೈಲ್, ಕಿಚನ್ ಫುಡ್ ಕಿಯೋಸ್ಕ್ ಸೌಲಭ್ಯಗಳನ್ನು ನಿಗಮಗಳ ಅಭಿವೃದ್ಧಿಶೀಲತೆ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಾನಸಿಕ ಆರೋಗ್ಯ ಕೇಂದ್ರ ಸ್ಥಾಪನೆ, ವಿದ್ಯಾರ್ಥಿ ನಿಲಯಗಳಲ್ಲಿ ಆಹಾರ ವ್ಯವಸ್ಥೆಯ ಪಾರದರ್ಶಕತೆ, ದಾವಣಗೆರೆಯ ಸಂತ ಸೇವಾಲಾಲ್ ಸೇವಾ ಕ್ಷೇತ್ರಕ್ಕೆ ಸೂರಗುಂಡನಕೊಪ್ಪದಲ್ಲಿ ವಸತಿ ಶಾಲೆ ನಿರ್ಮಾಣ, ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಎಸ್‌ಸಿ/ಎಸ್‌ಟಿ, ಓಬಿಸಿ ಸಮಸ್ಯೆಗಳ ಬಗ್ಗೆ ವಿಧಾನಮಂಡಲದಲ್ಲಿ ವಿಶೇಷ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.ಮೆಡಿಕಲ್ ಎಂಜಿನಿಯರ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಸ್ಟಲ್ ಸೌಲಭ್ಯ ದೊರೆಯದೇ ಇದ್ದರೆ ಪ್ರತಿ ತಿಂಗಳು 3,500, ಹಸು-ಎಮೆ ಖರೀದಿಗೆ 1.25 ಲಕ್ಷ ರೂ.ವರೆಗೆ ಸಹಾಯಧನ ನೀಡುವುದಾಗಿ ತಿಳಿಸಿದ್ದಾರೆ.