ಬೆಂಗಳೂರು,ಸೆ.3- ಪ್ರಸಕ್ತ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯಕ್ಕೆ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಮಂಜೂರು ಮಾಡಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಸತತದ ಪ್ರಯತ್ನದ ಫಲವಾಗಿ ಬಹುವರ್ಷಗಳ ನಂತರ ರಾಜ್ಯಕ್ಕೆ ಇಷ್ಟು ದೊಡ್ಡ ಮೊತ್ತದ ವೈದ್ಯಕೀಯ ಸೀಟುಗಳು ಲಭ್ಯವಾಗಿವೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ಮಂಜೂರು ಮಾಡಿರುವ ಸೀಟುಗಳಲ್ಲಿ ಸರ್ಕಾರದ ಅಧೀನದಲ್ಲಿರುವ 8 ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಹೆಚ್ಚುವರಿ ಸೀಟುಗಳು ಹಾಗೂ ಒಂದು ಡೀಮ್ಡೌ ವಿಶ್ವವಿದ್ಯಾನಿಲಯಕ್ಕೆ ಮಂಜೂರು ಮಾಡಲಾಗಿದೆ.
ಹೆಚ್ಚುವರಿ ಸೀಟುಗಳನ್ನು ಪಡೆಯುವ ಕಾಲೇಜುಗಳಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ, ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿವೆ.
ಇದೇ ವೇಳೆ ಪ್ರವೇಶ ಹೆಚ್ಚಳಕ್ಕೆ ಅರ್ಜಿ ಸಲ್ಲಿಸಿದ್ದ ಏಳು ಕಾಲೇಜುಗಳಾದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಿಗೆ ಅನುಮೋದನೆ ದೊರೆತಿಲ್ಲ.
ಹೊಸ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ, ರಾಮನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಕನಕಪು- ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.ರಾಮನಗರ ಮತ್ತು ಕನಕಪುರದಲ್ಲಿ ಸ್ಥಾಪಿಸಲಾಗಿರುವ ಎರಡು ವೈದ್ಯಕೀಯ ಕಾಲೇಜುಗಳಿಗೆ 250 ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜೊತೆಗೆ ಹುಬ್ಬಳ್ಳಿ ಜೆಎಂಎಂಎಂಸಿ , ತುಮಕೂರಿನ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜುಗಳು ತಮಗೂ 50 ವೈದ್ಯಕೀಯ ಸೀಟುಗಳನ್ನ ನೀಡಬೇಕೆಂಬ ಪ್ರಸ್ತಾವನೆಗೆ ಎನ್‌ಎಂಸಿ ಅನುಮೋದನೆ ನೀಡಿಲ್ಲ.ದೇಶಾದ್ಯಂತ ಪ್ರಸಕ್ತ ವರ್ಷ 8000 ವೈದ್ಯಕೀಯ ಸೀಟುಗಳನ್ನು ಹೆಚ್ಚಿಸಲಾಗುವುದು ಎಂದು ಎನ್‌ಎಂಸಿಯ ಅಧ್ಯಕ್ಷ ಅಭಿಜಿತ್ ಚಂದ್ರಕಾಂತ್ ಸೇಠ್ ಹೇಳಿದ್ದರು.
ಪ್ರಸ್ತಾವನೆ ಸಲ್ಲಿಸಿದ ಸಚಿವರು:
ಎನ್‌ಎಂಸಿ ದೇಶಾದ್ಯಂತ ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ನವದೆಹಲಿಗೆ ತೆರಳಿ ಭೇಟಿಯಾಗಿ ರಾಜ್ಯದ 15 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.ಕರ್ನಾಟಕದಲ್ಲಿ ಪ್ರತಿ ವರ್ಷ ವೈದ್ಯಕೀಯ ದಾಖಲಾತಿಯಾಗುವವರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವು ಪ್ರತಿಭಾವಂತ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಿಗೆ ಅಧಿಕ ಶುಲ್ಕ ಕಟ್ಟಿ ಪ್ರವೇಶ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕರ್ನಾಟಕಕ್ಕೆ ನಿಗದಿಪಡಿಸಿರುವ ವೈದ್ಯಕೀಯ ಸೀಟುಗಳು ಜೊತೆಗೆ ಹೆಚ್ಚುವರಿಯಾಗಿ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದ್ದರು.
ಕರ್ನಾಟಕ ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಮುಂದುವರೆದ ರಾಜ್ಯವಾಗಿದೆ. ಪ್ರತಿ ವರ್ಷ ಸಾವಿರಾರು ವೈದ್ಯಕೀಯ ಆಕಾಂಕ್ಷಿಗಳು ವೈದ್ಯಕೀಯ ಸೀಟು ಪಡೆಯಲು ಹರಸಾಹಸಪಡುತ್ತಾರೆ. ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಎಂಎನ್‌ಸಿ ಅಧ್ಯಕ್ಷ ಅಭಿಜಿತ್ ಚಂದ್ರಕಾಂತ್ ಸೇಠ್ ಅವರಿಗೆ ಅಂಕಿಸಂಖ್ಯೆಗಳ ಸಮೇತ ವಿವರಿಸಿದ್ದರು.
ಸಚಿವರ ಮಾತಿಗೆ ಸ್ಪಂದಿಸಿರುವ ಎನ್‌ಎಂಸಿ ಬಹುವರ್ಷಗಳ ನಂತರ ರಾಜ್ಯಕ್ಕೆ ದೊಡ್ಡ ಸಂಖ್ಯೆಯ ವೈದ್ಯಕೀಯ ಸೀಟುಗಳನ್ನು ಮಂಜೂರು ಮಾಡುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.