ಬೆಂಗಳೂರು,ಸೆ.24- ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ವಾರ್ಡ್ ಪುನರ್ವಿಂಗಡಣೆ ಕಾರ್ಯ ಪೂರ್ಣಗೊಂಡಿದೆ.198 ವಾರ್ಡ್ಗಳಿದ್ದ ಬಿಬಿಎಂಪಿಯನ್ನು ರದ್ದುಗೊಳಿಸಿದ ನಂತರ ರಚಿಸಲಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 400 ರಿಂದ 450 ವಾರ್ಡ್ಗಳು ರಚನೆಯಾಗುವ ಸಾಧ್ಯತೆಗಳಿವೆ.
ಜಿಬಿಎ ವಾರ್ಡ್ ವಿಂಗಡಣೆ ಪ್ರಕ್ರಿಯೆ ನಿಗದಿಯಂತೆ ಮುಕ್ತಾಯಗೊಂಡಿದ್ದು, ಇಂದು ಸಂಜೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸರ್ಕಾರಕ್ಕೆ ವಾರ್ಡ್ ವಿಂಗಡಣಾ ವರದಿ ಸಲ್ಲಿಸಲಿದ್ದಾರೆ.
ವಾರ್ಡ್ ವಿಂಗಡಣೆಯಲ್ಲಿ ಈ ಹಿಂದೆ ಆಗಿದ್ದ ಕೆಲ ಲೋಪ ದೋಷಗಳನ್ನು ಸರಿಪಡಿಸಲಾಗಿದೆ.
ಆಯಾ ವಿಧಾನಸಭಾ ಕ್ಷೇತ್ರಗಳ ವಾರ್ಡ್ಗಳನ್ನು ಅದೇ ಕ್ಷೇತ್ರದಲ್ಲಿ ಮುಂದುವರೆಸಲಾಗಿದೆ. ಆದರೆ, ಕೆಲವೊಂದು ವಾರ್ಡ್ಗಳು ಪಕ್ಕದ ವಿಧಾನಸಭಾ ಕ್ಷೇತ್ರಗಳಿಗೆ ಸೇರ್ಪಡೆಯಾಗಿದೆ ಎಂದು ಜಿಬಿಎ ಮೂಲಗಳು ಈ ಸಂಜೆಗೆ ತಿಳಿಸಿವೆ.
ಮೂಲಗಳ ಪ್ರಕಾರ ಪ್ರತಿ ನಗರ ಪಾಲಿಕೆಗೆ 75 ರಿಂದ 100 ವಾರ್ಡ್ಗಳನ್ನು ರಚಿಸಲಾಗಿದ್ದು, ಐದು ನಗರ ಪಾಲಿಕೆಗಳಿಂದ ಬರೊಬ್ಬರಿ 400 ರಿಂದ 450 ವಾರ್ಡ್ಗಳು ರಚನೆಯಾಗುವ ಸಾಧ್ಯತೆಗಳಿವೆಯಂತೆ.
ಮಹೇಶ್ವರ್ ರಾವ್ ಸಲ್ಲಿಸಿರುವ ವಾರ್ಡ್ ವಿಂಗಡಣಾ ವರದಿಯನ್ನು ಪರಿಶೀಲಿಸಿದ ನಂತರ ಸರ್ಕಾರ ಸಾರ್ವಜನಿಕ ಆಕ್ಷೇಪಣೆ ಆಹ್ವಾನಿಸಲಿದೆ. ಆಕ್ಷೇಪಣೆ ಸಲ್ಲಿಕೆ ಅವಧಿ ಪೂರ್ಣಗೊಂಡ ಕೂಡಲೇ ಅಂತಿಮ ವಾರ್ಡ್ಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ. ಒಟ್ಟಾರೆ, ನ.30 ರೊಳಗೆ ವಾರ್ಡ್ ವಿಂಗಡಣೆ ಹಾಗೂ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸುವುದರ ಜೊತೆಗೆ ಮುಂದಿನ ಜನವರಿ ಇಲ್ಲವೇ ಫೆಬ್ರವರಿಯಲ್ಲಿ ಜಿಬಿಎಗೆ ಚುನಾವಣೆ ನಡೆಸುವುದು ಸರ್ಕಾರದ ಗುರಿಯಾಗಿದೆ.