ಅಲೆಗಢ ಸೆ. 23 (ಪಿಟಿಐ) ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವಾಹನಗಳಿಗೆ ಬೆಂಕಿ ಹೊತ್ತುಕೊಂಡ ಪರಿಣಾಮ ಮಹಿಳೆ, ಮಗು ಸೇರಿದಂತೆ ನಾಲ್ವರು ಸುಟ್ಟು ಕರಕಲಾಗಿರುವ ಘಟನೆ ಅಲಿಘಡದಲ್ಲಿ ನಡೆದಿದೆ. ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ-34 ರಲ್ಲಿ ಕಾರು ಮತ್ತು ಕ್ಯಾಂಟರ್ ಡಿಕ್ಕಿ ಹೊಡೆದು ಮಹಿಳೆ ಮತ್ತು ಮಗು ಸೇರಿದಂತೆ ನಾಲ್ವರು ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಪಿ ಸೇತುವೆ ಬಳಿ ಅಲಿಗಢ ಕಡೆಗೆ ಹೋಗುತ್ತಿದ್ದ ಕಾರು ಟೈರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ.ವಾಹನವು ರಸ್ತೆ ವಿಭಜಕವನ್ನು ಭೇದಿಸಿ ಮುಂದೆ ಬರುತ್ತಿದ್ದ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಮೃಕ್ ಜೈನ್ ವರದಿಗಾರರಿಗೆ ತಿಳಿಸಿದ್ದಾರೆ.
ಘರ್ಷಣೆಯ ನಂತರ ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಅವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಜೈನ್ ಹೇಳಿದರು. ವಾಹನದಲ್ಲಿ ನಿಲುಕಿದ್ದ ಒಬ್ಬ ವ್ಯಕ್ತಿಯನ್ನು ಬಾರಿಹೋಕರ ಸಹಾಯದಿಂದ ಹೊರತೆಗೆದು ಪೊಲೀಸರು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರು ಹೇಳಿದರು. ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು ಮತ್ತು ಬಲಿಪಶುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.