ಅಲ್ಲಪ್ಪುಳ (ಕೇರಳ),ಡಿ.3- ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಲ್ಲರ್‌ಕೋಡ್ ಬಳಿ ನಿನ್ನೆ ರಾತ್ರಿ ಸಂಭವಿಸಿದೆ.
ಮೃತರನ್ನು ಲಕ್ಷದ್ವೀಪದ ಅಂಟ್ರೋನಾದ ಮಹಮದ್ ಇಬ್ರಾಹಿಂ (19), ಪಾಲಕ್‌ಕಾಡ್‌ನ ಸೆಕ್ಕಾರ್‌ಪುರಂನ ಶ್ರೀದೇವವತ್ಸಂ (19), ಕಣ್ಣೂರು ಮಾಟೈಲ್‌ನ ಮಹಮದ್ ಜಬ್ಬಾರ್(19), ಮಲ್ಲುಪುರಂ ಕೊಟ್ಟಕಲ್‌ನ ದೇವಾನದಂ (19), ಅಲ್ಲುಪುಳದ ಆಯಷ್ ಷಾಜಿ (19) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ 11 ವೈದ್ಯಕೀಯ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಐವರು ಸಾವನ್ನಪ್ಪಿದ್ದು, ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಗೊಂಡಿರುವ ವಿದ್ಯಾರ್ಥಿಗಳನ್ನು ವಂದನಂ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆ ರಾತ್ರಿ ಕಲರ್‌ಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಗುರುವಾಯುರ್‌ನಿಂದ ಕಾಯಂಕುಲಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾರೀ ಮಳೆ ಸುರಿಯುತ್ತಿರುವ ಕಾರಣ ಓವರ್‌ಟೇಕ್ ಮಾಡಲು ಚಾಲಕ ಮುಂದಾಗಿದ್ದ. ಈ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮೇಲ್ಭಾಗ ಕತ್ತರಿಸಿ ವಿದ್ಯಾರ್ಥಿಗಳನ್ನು ಹೊರತೆಗೆಯಲಾಗಿದೆ.ಬಸ್‌ನಲ್ಲಿದ್ದ 12 ಮಂದಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.