ಪೂನ,ನ.14- ಕಾಂಗ್ರೆಸ್ ಶಾಸಕರಿಗೆ ನಾವು 50 ಕೋಟಿ ರೂ. ಆಫರ್ ನೀಡಿರುವ ಬಗ್ಗೆ ದಾಖಲೆಗಳಿದ್ದರೆ ತಕ್ಷಣವೇ ಮುಖ್ಯಮಂತ್ರಿ ಸಿದ್ದ ರಾಮಯ್ಯ ನವರು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ. ಇಲ್ಲದಿದ್ದರೆ ನಾನು ಹೇಳುವುದು ಸುಳ್ಳು ಎಂದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷವೊಡ್ಡಿದವರು ಯಾರು? ಯಾವಾಗ ಆಫರ್ ನೀಡಲಾಯಿತು? ಎಲ್ಲಿ ಮಾತುಕತೆ ನಡೆಸಲಾಗಿತ್ತು? ಜೊತೆಗಿದ್ದವರು ಯಾರು? ಇವೆಲ್ಲವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯನವರು ಮಾಡಿರುವ ಆರೋಪಗಳು ಅತ್ಯಂತ ಗಂಭೀರವಾದುದು. ನಿಮ ಬಳಿಯೇ ತನಿಖಾ ಸಂಸ್ಥೆಗಳಿವೆ. ತಕ್ಷಣವೇ ತನಿಖೆ ನಡೆಸಲು ಯಾವುದಾದರೂ ಸಂಸ್ಥೆಗೆ ವಹಿಸಬೇಕು. ಇಲ್ಲದಿದ್ದರೆ ನ್ಯಾಯಾಲಯ ಕ್ಕಾದರೂ ದೂರು ನೀಡಿ ಎಂದು ಆಗ್ರಹಿಸಿದರು.ಸುಳ್ಳು ಆರೋಪಗಳನ್ನು ಮಾಡುವುದು ಸಿದ್ದರಾಮಯ್ಯನವರಿಗೆ ಇತ್ತೀಚೆಗೆ ಕರಗತವಾಗಿದೆ.
ಕುರ್ಚಿ ಅಲುಗಾಡುವಾಗಲೆಲ್ಲ ಆಪರೇಷನ್ ಕಮಲ 50 ಕೋಟಿ ರೂ. ಆಫರ್, ನನ್ನನ್ನು ಮುಟ್ಟಿದರೆ ಜೋಕೆ!, ರಾಜ್ಯದ ಜನ ಸುಮನಿರುವುದಿಲ್ಲ ಇಂತಹ ಹಸಿಹುಸಿ ಸುಳ್ಳುಗಳನ್ನು ಹೇಳುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
50 ಕೋಟಿ ರೂ. ಆಫರ್ಗೆ ಶಾಸಕರು ಬಿಜೆಪಿಗೆ ಬರುತ್ತಾರೆಂದರೆ ಕಾಂಗ್ರೆಸ್ ಶಾಸಕರು ಅಷ್ಟೊಂದು ದುರ್ಬಲರಾಗಿದ್ದಾರಾ? ನಿಮ ಶಾಸಕರೇ ನಿಮ ನಾಯಕತ್ವವನ್ನು ಒಪ್ಪುತ್ತಿಲ್ಲ. ಅದನ್ನು ಮರೆಮಾಚಲು ಸುಳ್ಳು ಹೇಳುತ್ತಿದ್ದೀರಿ. ಕುರ್ಚಿ ಉಳಿಸಿಕೊಳ್ಳಲು ಇಂತಹ ಆಧಾರ ರಹಿತ ಆರೋಪಗಳನ್ನು ಮಾಡುವುದು ಸಿದ್ದರಾಮಯ್ಯನವರಿಗೆ ಕರಗತವಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಮ ಪಕ್ಷದ ಯಾವುದೇ ಮುಖಂಡರು ಕಾಂಗ್ರೆಸ್ ಶಾಸಕರ ಜೊತೆ ಮಾತನಾಡಿರುವ ಬಗ್ಗೆ ದಾಖಲೆಗಳಿದ್ದರೆ ತಕ್ಷಣವೇ ದೂರು ನೀಡಬೇಕು. ಕುರ್ಚಿ ಅಲುಗಾಡುತ್ತಿರುವ ಸಂದರ್ಭದಲ್ಲಿ ಪ್ರತಿಪಕ್ಷಗಳ ಮೇಲೆ ಆರೋಪ ಮಾಡುವುದು ಕಾಂಗ್ರೆಸ್ಗೆ ಪ್ರವೃತ್ತಿಯಾಗಿದೆ ಎಂದು ಕಿಡಿಕಾರಿದರು.
ನಾವು ನಿಮ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುತ್ತೇವೆ. ಭ್ರಷ್ಟಾಚಾರವನ್ನು ಹೊರಗೆಳೆದಿದ್ದೇವೆ. ಮುಡಾ, ವಾಲೀಕಿ ಸೇರಿದಂತೆ ಅನೇಕ ಹಗರಣಗಳನ್ನು ಜನತೆಯ ಗಮನಕ್ಕೆ ತಂದಿದ್ದೇವೆ. ಅದನ್ನು ಮರೆಮಾಚಲು ಸುಳ್ಳು ಆರೋಪಗಳನ್ನು ಸಿದ್ದರಾಮಯ್ಯ ಮಾಡಬಾರದು. ದಾಖಲೆಗಳಿದ್ದರೆ ತಕ್ಷಣವೇ ದೂರು ಕೊಡಿ ಎಂದು ಸಿ.ಟಿ.ರವಿ ಒತ್ತಾಯಿಸಿದರು.