Friday, November 22, 2024
Homeರಾಜ್ಯಗ್ಯಾರಂಟಿಗಳಿಗೆ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ. ಅನುದಾನ ಮೀಸಲು

ಗ್ಯಾರಂಟಿಗಳಿಗೆ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ. ಅನುದಾನ ಮೀಸಲು

ಬೆಂಗಳೂರು,ಫೆ.16- ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭರ್ಜರಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಈ ಬಾರಿಯ ಬಜೆಟ್‍ನಲ್ಲಿ 52 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ, ಯುವನಿಧಿ ಹಾಗು ಅನ್ನ ಭಾಗ್ಯ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ ಒಟ್ಟು 52 ಸಾವಿರ ಕೋಟಿ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದರು.

ಅನ್ನಭಾಗ್ಯ ಯೋಜನೆಗಳ ಮೂಲಕ ಕೋಟ್ಯಂತರ ಜನರ ಕೈ ಹಂಚಿಕೆ ಮಾಡಲಾಗುತ್ತಿದ್ದು, ಈ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಪ್ರತಿ ಕುಟುಂಬಕ್ಕೆ 50 ಸಾವಿರದಿಂದ 55 ಸಾವಿರದವರೆಗೆ ಒದಗಿಸಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ಇಡೀ ಜಗತ್ತು ಕರ್ನಾಟಕದತ್ತ ನೋಡುತ್ತಿದೆ. ಹಲವು ದೇಶಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಅಧ್ಯಯನ ನಡೆಸಿ ಇದನ್ನು ಶ್ಲಾಘಿಸಿವೆ. ಗ್ಯಾರಂಟಿ ಯೋಜನೆಗಳು ದೃಢವಾಗಲು ಕೇವಲ ಅಧ್ಯಯನ ಮಾತ್ರವಲ್ಲ ಬಸ್ ಹತ್ತುವ ಮುನ್ನ ತಲೆ ಬಾಗಿ ನಮಸ್ಕರಿಸಿದ ಮಹಿಳೆಯ ಮುಖದಲ್ಲಿದ್ದ ಸಂತೋಷ, ದೇವಾಲಯಗಳಿಗೆ ಭೇಟಿ ನೀಡುತ್ತಿರುವ ಲಕ್ಷಾಂತರ ಮಹಿಳೆಯರ ಪ್ರಾರ್ಥನೆ,ಯುವನಿ ನೆರವು ನಿರುದ್ಯೋಗಿ ಯುವಕನ ಆನಂದಬಾಸ್ಪ ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. ಅಭಿವೃದ್ಧಿಯ ಫಲವನ್ನು ಜನಸಾಮಾನ್ಯರಿಗೆ ಹಿಂದುರುಗಿಸುವಲ್ಲಿ ಅನನ್ಯವಾದ ಸಂತೃಪ್ತಿಯಿದೆ ಎಂದು ಹೇಳಿದ್ದಾರೆ.

ಜೆಟ್ ಏರ್‌ವೇಶ್‌ ಸಂಸ್ಥಾಪಕನಿಗೆ ಕ್ಯಾನ್ಸರ್, ಮಧ್ಯಂತರ ಜಾಮೀನಿಗೆ ಅರ್ಜಿ

ನಮ್ಮ ವಿರೋಧಿಗಳು ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿ, ರಾಜ್ಯ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳಿ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸಲಾಗದವರು ತಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇಂಥ ಟೀಕೆಗಳನ್ನು ಮಾಡುತ್ತಾರೆ. ಇನ್ನೊಂದೆಡೆ ನಮ್ಮ ಗ್ಯಾರಂಟಿಗಳನ್ನು ಕದ್ದು ಅವರ ಗ್ಯಾರಂಟಿಗಳೆಂದು ನಂಬಿಸಲು ಹೆಣಗಾಡುತ್ತಿದ್ದಾರೆ ಇಂತಹ ಟೀಕೆಗಳಿಗೆ ನಾನಲ್ಲ, ಶರಣರೇ ಉತ್ತರ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮನ ಶುದ್ದವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷಿ ತಾನಾಗಿಪ್ಪಳು
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ ಎಂದು ಶರಣೆ ಆಯ್ದಕ್ಕಿ ಲಕ್ಕಮ್ಮ ಅವರ ವಚನವನ್ನು ಉಲ್ಲೇಖಿಸಿ ಪ್ರತಿಪಕ್ಷದವರಿಗೆ ಸಿದ್ದರಾಮಯ್ಯ ತಿರುಗೇಟು ಕೊಟಿದ್ದಾರೆ.

RELATED ARTICLES

Latest News