ಬೆಂಗಳೂರು, ಜ.01- ಹೊಸ ವರ್ಷಾ ಚರಣೆ ಮುಗಿಸಿ ಕಾರುಗಳಲ್ಲಿ ಹಿಂದಿ ರುಗುತ್ತಿದ್ದ ಸಂದರ್ಭದಲ್ಲೇ ತಡರಾತ್ರಿ ಹಾಗೂ ಇಂದು ಮುಂಜಾನೆ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಆರು ಮಂದಿ ಮೃತಪಟ್ಟಿರುವ ದಾರುಣ ಘಟನೆಗಳು ನಡೆದಿವೆ.ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ನಾಲ್ವರು ಮೃತಪಟ್ಟರೆ, ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ಇಬ್ಬರು ಮೃತ ಪಟ್ಟಿದ್ದಾರೆ.
ಮಾಗಡಿ:
ಹೊಸ ವರ್ಷಾಚರಣೆ ನಿಮಿತ್ತ ಆರು ಮಂದಿ ಸ್ನೇಹಿತರು ಬೆಂಗಳೂರಿನಲ್ಲಿ ತೆರಳಿ ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ಟೀ ಕುಡಿಯಲೆಂದು ತಾಳೆಕೆರೆಗೆ ಹೋಗುತ್ತಿದ್ದಾಗ ಹೊಸ ಪಾಳ್ಯ ತಿರುವಿನ ಬಳಿ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ತಾವರೆಕೆರೆ ನಿವಾಸಿಗಳಾದ ಮಂಜುನಾಥ(31) ಮತ್ತು ಕಿರಣ್(30) ಮೃತಪಟ್ಟವರು. ಇವರಿಬ್ಬರು ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನುಳಿದ ನಾಲ್ವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ತಾವರೇಕೆರೆ ಸುತ್ತಮುತ್ತಲ ನಿವಾಸಿಗಳಾದ ಆರು ಮಂದಿ ಸ್ನೇಹಿತರು ಇನೋವಾ ಕಾರಿನಲ್ಲಿ ಬೆಂಗಳೂರಿಗೆ ಬಂದು ಪಾರ್ಟಿ ಮಾಡಿಕೊಂಡು ಟೀ ಕುಡಿಯಲೆಂದು ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದಾಗ ಮಾಗಡಿ- ಕುಣಿಗಲ್ ರಸ್ತೆಯ ಹೊಸ ಪಾಳ್ಯ ಬಳಿಯ ತಿರುವಿನಲ್ಲಿ ಕಾರು ನಿಯಂತ್ರಣ ತಪ್ಪಿ ಉರುಳಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿದು ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಾತನೂರು:
ಬೆಂಗಳೂರಿನ ಖಾಸಗಿ ಕಂಪೆನಿ ನೌಕರರು ಮೈಸೂರಿಗೆ ಕಾರಿನಲ್ಲಿ ಹೋಗಿ ನೂತನ ವರ್ಷಾಚರಣೆಯಲ್ಲಿ ಪಾಲ್ಗೊಂಡು ಪಾರ್ಟಿ ಮುಗಿಸಿಕೊಂಡು ರಾತ್ರಿ 11.45ರ ಸುಮಾರಿನಲ್ಲಿ ಹಿಂದಿರುಗುತ್ತಿದ್ದರು. ಕಾರು ಸಾತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಳವಳ್ಳಿ- ಬೆಂಗಳೂರು ರಸ್ತೆಯ ಸಂತೆಮಾಳ ಸರ್ಕಲ್ ಬಳಿ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕ್ಯಾಂಟರ್ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ. ನಿರಂಜನ್ ಮತ್ತು ವಿಶ್ವನಾಥ್ ಮೃತಪಟ್ಟ ಖಾಸಗಿ ಕಂಪೆನಿ ನೌಕರರು. ಸುದ್ದಿ ತಿಳಿಯುತ್ತಿದ್ದಂತೆ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ತೆರಕಣಾಂಬಿ:
ಫಾರಂ ಹೌಸ್ವೊಂದರಲ್ಲಿ ಪಾರ್ಟಿ ಮಾಡಿಕೊಂಡು ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಕಾರು ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ಚಾಮರಾಜ ನಗರ ಜಿಲ್ಲೆಯ ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.
ಮದ್ದೂರಿನ ನಿವಾಸಿ ಪ್ರತಾಪ್ ಕುಮಾರ್ ಹಾಗೂ ಕೊಡಸೋಗೆಯ ನಿವಾಸಿ ಕೊಂಗಳಯ್ಯ ಮೃತಪಟ್ಟವರು. ಪ್ರತಾಪ್ ಕುಮಾರ್ ಅವರು ಬೊಮಲಾಪುರ ಸೆಸ್ಕ್ ಕಚೇರಿಯಲ್ಲಿ ಅಸಿಸ್ಟೆಂಟ್ ಪವರ್ ಮ್ಯಾನ್ ಉದ್ಯೋಗಿ.ಘಟನೆಯಲ್ಲಿ ಸ್ನೇಹಿತ, ಮಂಡ್ಯ ಜಿಲ್ಲೆಯ ನಿವಾಸಿ ಅಭಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಸಿಮ್ಸೌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ನೇಹಿತರೆಲ್ಲ ಸೇರಿ ಫಾರಂ ಹೌಸ್ನಲ್ಲಿ ಪಾರ್ಟಿ ಮಾಡಿ ವಾಪಸ್ ಮನೆಗೆ ತೆರಳುತ್ತಿದ್ದಾಗ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಬಳಿ ಇವರ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಸುದ್ದಿ ತಿಳಿದು ತೆರಕಣಾಂಬಿ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.