ಬೆಳಗಾವಿ,ಡಿ.18- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 5ರಿಂದ 6 ಸಾವಿರ ಆಸ್ತಿಗಳನ್ನು ನೋಂದಣಿ ಮಾಡಿ ಮುಜರಾಯಿ ದೇವಸ್ಥಾನಗಳಿಗೆ ಹಸ್ತಾಂತರ ಮಾಡಿದ್ದೇವೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದರು.
ವಿಧಾನಪರಿಷತ್ನಲ್ಲಿ ಸದಸ್ಯ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಉತ್ತರಿಸಿದ ಅವರು, ನಾವು ಅಧಿಕಾರಕ್ಕೆ ಬಂದ ನಂತರ 6ರಿಂದ 7 ಸಾವಿರ ಆಸ್ತಿಗಳನ್ನು ನೋಂದಣಿ ಮಾಡಿಕೊಟ್ಟಿದ್ದೇವೆ. ಇದರ ದಾಖಲೆಗಳನ್ನು ನಾನು ಸದನದಲ್ಲೂ ನೀಡಲಿದ್ದೇವೆ. ಹಲವಾರು ವರ್ಷಗಳಿಂದ ಆಗದೆ ಇದ್ದ ಕೆಲಸ ನಮ ಅವಧಿಯಲ್ಲಿ ಆಗಿದೆ ಎಂದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಒಂದು ಸಾವಿರ ಎಕರೆ ಜಮೀನನ್ನು ಒಂದು ತಿಂಗಳ ಒಳಗೆ ಲೆಕ್ಕ ಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಲಾಗಿದೆ. ಯಾರೇ ಭೂಕಬಳಿಕೆ ಮಾಡಿದರೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಹಿಂದೆ ದಾನಿಗಳು ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ 1198 ಎಕರೆ ಜಮೀನು 1939ರಲ್ಲಿ ದಾನ ಮಾಡಿದ್ದರು. ಇದರಲ್ಲಿ ಮಹಿಳಾ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತಿತರ ಸಾರ್ವಜನಿಕ ಉಪಯೋಗಕ್ಕೆ ಅನುಕೂಲವಾಗಲೆಂದು ನೀಡಲಾಗಿತ್ತು. ಇದರಲ್ಲಿ 198 ಎಕರೆ ಜಮೀನನ್ನು ನಿರಾಶ್ರಿತರಿಗೆ ನೀಡಲಾಗಿದೆ. ಖಾತೆ ಇಲ್ಲದವರಿಗೆ ಖಾತೆ ಮಾಡಿಕೊಟ್ಟಿದ್ದೇವೆ. ನಿಯಮಗಳ ಪ್ರಕಾರ ದೇವಸ್ಥಾನದ ಆಸ್ತಿಯನ್ನು ಯಾರಿಗೂ ಕೂಡ ನಾವು ಪರಭಾರೆ ಮಾಡಲು ಅವಕಾಶವಿಲ್ಲ. ನಿರಾಶ್ರಿತರು ಎಂಬ ಕಾರಣಕ್ಕಾಗಿ ಮಾಡಿಕೊಡಲಾಗಿದ ಎಂದು ಸಮರ್ಥಿಸಿಕೊಂಡರು.
ಇದರಲ್ಲಿ ಚೋಳನಾಯಕನಹಳ್ಳಿ, ಬ್ಯಾಲಾಳು, ಪೆದ್ದನಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕುರುಬರಹಳ್ಳಿ ಗ್ರಾಮಗಳಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದರು. ನ್ಯಾಯಾಲಯದ ತೀರ್ಪಿನಂತೆ ಕೇವಲ ಮೂರು ತಿಂಗಳ ಒಳಗೆ 56 ಎಕರೆ ಜಮೀನನ್ನು ಮರು ವಶಪಡಿಸಿಕೊಂಡಿದ್ದೇವೆ. ಇದರಲ್ಲಿ ಯಾರನ್ನು ರಕ್ಷಣೆ ಮಾಡುವುದಿಲ್ಲ ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದು ಎಚ್ಚರಿಸಿದರು.
ಹಿಂದೆ ಏನಾಗಿದೆ ಎಂಬುದು ಮುಖ್ಯವಲ್ಲ. ಪ್ರಸ್ತುತ ಈಗ ಏನು ಮಾಡುತ್ತಿದ್ದೇವೆ ಎಂದಷ್ಟೇ ಮುಖ್ಯವಾಗಬೇಕು. ಹಿಂದಿನ ಕಥೆಗಳನ್ನು ಹೇಳುತ್ತಾ ಹೋದರೆ, ಈಗಿರುವ ಜಮೀನನ್ನು ಸಹ ಉಳಿಸಿಕೊಳ್ಳಲು ಆಗುವುದಿಲ್ಲ. ದೇವಸ್ಥಾನದ ಜಮೀನನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ಕೊಟ್ಟರು.
ದೇವಸ್ಥಾನಕ್ಕೆ ಸೇರಿದ ಜಮೀನನ್ನು ವಶಕಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ. ರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಜಮೀನು ಇನ್ನು ಒಂದು ಸಾವಿರ ಎಕರೆ ಇದೆ. ನಾವು ವಿಶೇಷ ಗಮನಹರಿಸಿದ ಪರಿಣಾಮ ಉಳಿಸಿಕೊಳ್ಳುವ ಪ್ರಯತ್ನವಾಗಿ ಆಯುಕ್ತರಿಗೆ ಆಡಿಟ್ ಮಾಡಲು ಸೂಚಿಸಿದ್ದೇವೆ. ಇದನ್ನು ಸರ್ಕಾರ ವಶಪಡಿಸಿಕೊಂಡ ನಂತರ ದೇವಸ್ಥಾನಕ್ಕೆ ಸಮರ್ಪಣೆ ಮಾಡಲಿದೆ. ದೇವಸ್ಥಾನಕ್ಕೆ ಸೇರಿದ ಆಸ್ತಿ ಅದಕ್ಕೇ ಸೇರಬೇಕು. ಇದರಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದರು.