ಛತ್ತೀಸ್‌ಗಡ, ಏ. 8: ವ್ಯಕ್ತಿಯೊಬ್ಬ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ, ಪಕ್ಕದ ಮನೆಯ ಕಾರಿನಲ್ಲಿ ಶವವಿಟ್ಟಿರುವ ಘಟನೆ ಛತ್ತೀಸ್‌ಗಢದ ದುರ್ಗ್ ನಲ್ಲಿ ನಡೆದಿದೆ. ಮೃತ ಬಾಲಕಿಯ ಸಂಬಂಧಿಯೇ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅತ್ಯಾಚಾರ ಮಾಡಿ ಕೊಲೆ ಮಾಡಿ, ಶವವನ್ನು ಕಾರಿನಲ್ಲಿ ಬಚ್ಚಿಟ್ಟು ಬೀಗ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನವರಾತ್ರಿ ಹಬ್ಬದ ಭಾಗವಾಗಿ ಆಯೋಜಿಸಲಾಗಿದ್ದ ಆಚರಣೆಯ ನಂತರ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಕನ್ಯಾ ಭೋಜನದಲ್ಲಿ ಭಾಗವಹಿಸಲು ಮಗು ತನ್ನ ಅಜ್ಜಿಯ ಮನೆಗೆ ಭೇಟಿ ನೀಡಿತ್ತು, ಆದರೆ ಮನೆಗೆ ಹಿಂತಿರುಗಲಿಲ್ಲ. ಆಕೆಯ ಕುಟುಂಬವು ಪೊಲೀಸರಿಗೆ ನಾಪತ್ತೆ ದೂರು ನೀಡುವ ಮೊದಲು ತೀವ್ರ ಹುಡುಕಾಟವನ್ನು ಪ್ರಾರಂಭಿಸಿತ್ತು ಎಂದು ದುರ್ಗ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಖನಂದನ್ ರಾಥೋಡ್ ಮಾಹಿತಿ ನೀಡಿದ್ದಾರೆ..
ಬಾಲಕಿಯ ಅಜ್ಜಿ ಮತ್ತು ಇನ್ನೊಬ್ಬ ಸಂಬಂಧಿ ದೇವಸ್ಥಾನಕ್ಕೆ ಹೋಗಿದ್ದರು ಮತ್ತು ಆರೋಪಿ ಸೋಮೇಶ್ ಯಾದವ್, ಮನೆಯಲ್ಲಿ ಇದ್ದ, ಎಂದು ಅವರು ಹೇಳಿದರು. ಯಾದವ್ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕೊಂದು, ನಂತರ ಆಕೆಯ ಶವವನ್ನು ಪಕ್ಕದ ಮನೆಯವರ ಕಾರಿನೊಳಗೆ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರನ್ನು ನಿತ್ಯ ಅಲ್ಲಿಯೇ ನಿಲ್ಲಿಸಲಾಗುತ್ತಿತ್ತು ಮತ್ತು ಅದರ ಒಂದು ಬಾಗಿಲು ಅನ್‌ಲಾಕ್ ಆಗಿರುವುದು ಆರೋಪಿಗೆ ತಿಳಿದಿತ್ತು ಎಂದು ಅಧಿಕಾರಿ ಹೇಳಿದರು. ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದ ಮೂವರು ಶಂಕಿತರಲ್ಲಿ ಆರೋಪಿಯೂ ಒಬ್ಬ ಎಂದು ಎಎಸ್ಪಿ ತಿಳಿಸಿದ್ದಾರೆ.
ಕಾರು ಮಾಲೀಕರು ಸೇರಿದಂತೆ ಮೂವರು ಶಂಕಿತರಲ್ಲಿ ಇಬ್ಬರನ್ನು ವಿಚಾರಣೆಯ ನಂತರ ಬಿಡುಗಡೆ ಮಾಡಲಾಗಿದೆ.ರಾತ್ರಿ ವೇಳೆ ಕಾರಿನಲ್ಲಿ ಶವವಿರುವುದು ಬೆಳಕಿಗೆ ಬಂದಿತ್ತು, ಹುಡುಗಿಯ ದೇಹದಲ್ಲಿ ಗಾಯದ ಗುರುತುಗಳಿದ್ದವು ಮತ್ತು ವೈದ್ಯಕೀಯ ವರದಿಯು ಲೈಂಗಿಕ ದೌರ್ಜನ್ಯವನ್ನು ದೃಢಪಡಿಸಿದೆ ಎಂದು ರಾಥೋಡ್ ಹೇಳಿದರು.
ತನಿಖೆಯ ಸಮಯದಲ್ಲಿ ಸಂಬಂಧಿಯೇ ಅಪರಾಧದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ ಮತ್ತು ಅವರನ್ನು ಬಂಧಿಸಲಾಯಿತು ಎಂದು ರಾಥೋಡ್ ಹೇಳಿದರು.
ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದರು.