ಬೆಂಗಳೂರು,ನ.22-ನಗರದಲ್ಲಿ 7 ಕೋಟಿ ಹಣ ಹಗಲು ದರೋಡೆ ಪ್ರಕರಣದ ಪ್ರಮುಖ ಆರೋಪಿಗಳಿಗಾಗಿ ನಗರದ ದಕ್ಷಿಣ ವಿಭಾಗದ ಪೊಲೀಸರು ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಟ್ರಾವಲ್ಸ್ ಮಾಲೀಕ ಹಾಗೂ ದರೋಡೆ ಕೃತ್ಯದ ಪ್ರಮುಖ ಆರೋಪಿ ತನ್ನ ಸಹಚರನ ಜೊತೆ ಸೇರಿ ಎಟಿಎಂ ಹಣ ದರೋಡೆ ಮಾಡಿದ ನಂತರ ಸುಮಾರು 1.50 ಕೋಟಿ ಹಣವನ್ನು ತೆಗೆದುಕೊಂಡು ನೆರೆ ರಾಜ್ಯಗಳಿಗೆ ಪರಾರಿಯಾಗಿದ್ದ ಎಂಬ ಮಾಹಿತಿಯನ್ನು ವಿಶೇಷ ತಂಡಗಳು ಪತ್ತೆಹಚ್ಚಿವೆ.
ಹಣ ದರೋಡೆ ಮಾಡಿದ ನಂತರ ಆರೋಪಿಗಳು ಇನೋವಾ ಕಾರಿನಲ್ಲಿ ಹಣದ ಟ್ರಂಕ್‌ಗಳನ್ನು ತೆಗೆದುಕೊಂಡು ಕೆಆರ್‌ಪುರದ ಬಟ್ಟರಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶದ ಚಿತ್ತೂರಿಗೆ ಹೋಗಿ ನಿರ್ಜನ ಪ್ರದೇಶದ ಬಳಿ ಕಾರು ನಿಲ್ಲಿಸಿ ಎಟಿಎಂ ಟ್ರಂಕ್‌ಗಳಲಿದ್ದ ಹಣವನ್ನೆಲ್ಲಾ ಬ್ಯಾಗ್‌ಗಳಿಗೆ ತುಂಬಿಕೊಂಡು ಟ್ರಂಕ್‌ಗಳನ್ನು ಪೊದೆಯ ಬಳಿ ಬಿಸಾಡಿದ್ದಾರೆ.
ನಂತರ ಪೊಲೀಸರ ದಿಕ್ಕು ತಪ್ಪಿಸುವ ಸಲುವಾಗಿ ಕಾರನ್ನು ತೆಗೆದುಕೊಂಡು ಸ್ವಲ್ಪ ದೂರ ಹೋಗಿ ಸಮೀಪದ ಸರ್ವಿಸ್ ರಸ್ತೆ ಬಳಿ ಕಾರನ್ನು ಬಿಟ್ಟು ಬೇರೊಂದು ಕಾರಿನಲ್ಲಿ ದರೋಡೆಕೋರರು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ.ದರೋಡೆಕೋರರನ್ನು ಬೆನ್ನಟ್ಟಿದ ವಿಶೇಷ ತಂಡಗಳು ದರೋಡೆಗೆ ಆರೋಪಿಗಳು ಬಳಸಿದ ಕಾರನ್ನು ಪತ್ತೆಹಚ್ಚಿದರು. ನಂತರ ಚಿತ್ತೂರು ಹಾಗೂ ತಿರುಪತಿ ಸುತ್ತಮುತ್ತ ದರೋಡೆಕೋರರಿಗಾಗಿ ವ್ಯಾಪಕ ಶೋಧ ನಡೆಸಿದರಾದರೂ ಆರೋಪಿಗಳು ಸಿಕ್ಕಿಲ್ಲ.
ಮತ್ತೊಂದು ತಂಡ ತಮಿಳುನಾಡಿಗೆ ಹೋಗಿ ಶೋಧ ನಡೆಸುತ್ತಿದ್ದಾಗ ದರೋಡೆಕೋರರು ಬಾರ್‌ವೊಂದರಲ್ಲಿ ಮದ್ಯ ಖರೀದಿಸಿರುವುದು ಕಂಡು ಬಂದ ಹಿನ್ನಲೆಯಲ್ಲಿ ಅವರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಈ ಪ್ರಮುಖ ಆರೋಪಿ ಸಿಕ್ಕಿದ ನಂತರವಷ್ಟೇ ದರೋಡೆಯಾಗಿರುವ ಪೂರ್ಣ ಹಣ ಸಿಗಲಿದೆ. ಹಾಗಾಗಿ ವಿಶೇಷ ತಂಡಗಳು ಈತನ ಬಂಧನಕ್ಕಾಗಿ ತೀವ್ರ ಶೋಧ ನಡೆಸುತ್ತಿವೆ.
