ಮುಂಬೈ,ಆ.8- ಸುಮಾರು ಎರಡು ವರ್ಷಗಳ ಕಾಲ ನಡೆದ ಹಗರಣದಲ್ಲಿ 734 ಆನ್‌ಲೈನ್ ವಹಿವಾಟುಗಳಲ್ಲಿ, ಮುಂಬೈನ 80 ವರ್ಷದ ವೃದ್ಧನೊಬ್ಬನಿಗೆ ಪ್ರೀತಿ ಮತ್ತು ಸಹಾನುಭೂತಿಯ ಹೆಸರಿನಲ್ಲಿ ನಾಲ್ವರು ಮಹಿಳೆಯರು ಸುಮಾರು 9 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.
ಏಪ್ರಿಲ್ 2023ರಲ್ಲಿ, ವೃದ್ಧ ಶಾರ್ವಿ ಎಂಬ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದನು. ಆಕೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲಿಲ್ಲ. ಕೆಲವು ದಿನಗಳ ನಂತರ, ವೃದ್ಧನಿಗೆ ಶಾರ್ವಿಯ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು.
ಇಬ್ಬರೂ ಚಾಟ್ ಮಾಡಲು ಪ್ರಾರಂಭಿಸಿದರು ಮತ್ತು ಫೋನ್ ಸಂಖ್ಯೆಗಳು ವಿನಿಮಯವಾದವು. ಚಾಟ್‌ಗಳು ಫೇಸ್‌ಬುಕ್‌ನಿಂದ ವಾಟ್ಸಾಪ್‌ಗೆ ಸ್ಥಳಾಂತರಗೊಂಡವು. ಶಾರ್ವಿ ತನ್ನ ಪತಿಯಿಂದ ಬೇರ್ಪಟ್ಟು ಮಕ್ಕಳೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದಳು. ಕ್ರಮೇಣ ಹಣ ಕೇಳಲು ಪ್ರಾರಂಭಿಸಿದಳು, ತನ್ನ ಮಕ್ಕಳು ಅಸ್ವಸ್ಥರಾಗಿದ್ದಾರೆಂದು ವೃದ್ಧನಿಗೆ ತಿಳಿಸಿದ್ದಳು.
ಕೆಲವು ದಿನಗಳ ನಂತರ, ಕವಿತಾ ಎಂಬ ಮಹಿಳೆ ಕೂಡ ಆ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಶಾರ್ವಿಗೆ ಪರಿಚಿತಳು ಎಂದು ಹೇಳಿಕೊಂಡು ಸ್ನೇಹ ಬೆಳೆಸಲು ಬಯಸುತ್ತೇನೆ ಎಂದಿದ್ದಳು. ಶೀಘ್ರದಲ್ಲೇ ಅವಳು ವೃದ್ಧನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದಳು ಮತ್ತು ಹಣ ಕೇಳಲು ಪ್ರಾರಂಭಿಸಿದಳು.
ಡಿಸೆಂಬರ್‌ನಲ್ಲಿ ಶಾರ್ವಿಯ ಸಹೋದರಿ ಎಂದು ಹೇಳಿಕೊಂಡು ಇನ್ನೊಬ್ಬ ಮಹಿಳೆಯಿಂದ ಸಂದೇಶ ಬರಲಾರಂಭಿಸಿತು.
ದಿನಾಜ್ ವೃದ್ಧನಿಗೆ ಶಾರ್ವಿ ಮೃತಪಟ್ಟಿದ್ದಾಳೆಂದು ಹೇಳಿ ಆಸ್ಪತ್ರೆಯ ಬಿಲ್ ಪಾವತಿಸಲು ಕೇಳಿದ್ದಳು. ದಿನಾಜ್ ಶಾರ್ವಿ ಮತ್ತು ವೃದ್ಧನ ನಡುವಿನ ವಾಟ್ಸಾಪ್ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಹಣ ಸುಲಿಗೆ ಮಾಡಿದ್ದಳು.
ವೃದ್ಧ ತನ್ನ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ದಿನಾಜ್ ಆತಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.
ವೃದ್ಧನ ಕಷ್ಟ ಅಲ್ಲಿಗೆ ಮುಗಿಯಲಿಲ್ಲ. ಸ್ವಲ್ಪ ಸಮಯದ ನಂತರ ಜಾಸಿನ್ ಎಂಬ ಮಹಿಳೆ ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಅವಳು ದಿನಾಜ್‌ನ ಸ್ನೇಹಿತೆ ಎಂದು ಹೇಳಿಕೊಂಡು ಸಹಾಯಕ್ಕಾಗಿ ಬೇಡಿಕೊಂಡಳು. ವೃದ್ಧನು ಅವಳಿಗೂ ಹಣ ಸಹ ಕಳುಹಿಸಿದ್ದ.
ಏಪ್ರಿಲ್ 2023ರಿಂದ ಜನವರಿ 2025ರವರೆಗೆ, ವೃದ್ಧ 734 ವಹಿವಾಟುಗಳಲ್ಲಿ 8.7 ಕೋಟಿ ರೂ.ಗಳನ್ನು ಪಾವತಿಸಿದ್ದಾನೆ.
ತನ್ನ ಉಳಿತಾಯವೆಲ್ಲ ಖಾಲಿಯಾದ ನಂತರ, ವೃದ್ಧ ತಮ ಸೊಸೆಯಿಂದ ಮಹಿಳೆಯರಿಗೆ ಹಣ ನೀಡಲು 2 ಲಕ್ಷ ರೂ. ಸಾಲ ಪಡೆದಿದ್ದಾರೆ. ಆದರೆ ಮಹಿಳೆಯರ ಬೇಡಿಕೆಗಳು ನಿಲ್ಲಲಿಲ್ಲ. ನಂತರ ವೃದ್ಧ ತಮ ಮಗನ ಬಳಿ 5 ಲಕ್ಷ ರೂ. ಕೇಳಿದ್ದರು. ಆಗ ಅನುಮಾನಗೊಂಡ ಮಗ ಹಣ ಏಕೆ ಬೇಕು ಎಂದು ಪ್ರಶ್ನಿಸಿದ್ದರು.
ಆಘಾತದಿಂದ ಆಸ್ಪತ್ರೆಗೆ ದಾಖಲು:
ಸೈಬರ್ ವಂಚನೆಯಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ಅರಿತುಕೊಂಡ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಬುದ್ಧಿಮಾಂದ್ಯತೆ ಇರುವುದು ಪತ್ತೆಯಾಗಿದೆ.
ಕಳೆದ ಜುಲೈ 22ರಂದು ಸೈಬರ್ ಅಪರಾಧ ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಆ ನಾಲ್ವರು ಮಹಿಳೆಯರು ವೃದ್ಧನನ್ನು ವಂಚಿಸಿದ ಒಬ್ಬರೇ ವ್ಯಕ್ತಿಯಾಗಿರಬಹುದು ಎಂದು ಶಂಕಿಸಿದ್ದಾರೆ.