ಬೆಂಗಳೂರು, ಸೆ.1- ಮಾನವ ಸಂಪನೂಲ ಕೊರತೆಯ ಕಾರಣಕ್ಕೆ ಸಾರ್ವಜನಿಕರಿಗೆ ನೂರಾರು ಕೋಟ್ಯಂತರ ರೂಪಾಯಿ ವಂಚನೆಯಾಗಿದ್ದ 74 ಗಂಭೀರ ಪ್ರಕರಣಗಳು ತನಿಖೆಯಾಗದೆ ಸಿಬಿಐನಲ್ಲಿ ಬಾಕಿ ಉಳಿದಿದ್ದು, ತೊಂದರೆಗೆ ಒಳಗಾದವರು ನ್ಯಾಯಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಗುರು ರಾಘವೇಂದ್ರ ಬ್ಯಾಂಕ್ ನಿಯಮಿತ ಹಾಗೂ ಶ್ರೀ ಗುರು ಸೌರ್ವಭೌಮ ಸೌಹಾರ್ಧ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಒಂದು, ಶಂಕರಪುರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ಅವುಗಳ ತನಿಖೆಗೆ ಸಿಬಿಐಗೆ ವಹಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ಸಿಬಿಐ ತನಿಖೆಯಲ್ಲಿ ಮಹತ್ವದ ಪ್ರಗತಿಯಾಗಿಲ್ಲ.
ಈ ಸಂಸ್ಥೆಗಳಲ್ಲಿ ಕೋಟ್ಯಂತರ ರೂಪಾಯಿ ಠೇವಣಿ ಮಾಡಿದ ಸಾವಿರಾರು ಜನ ವಂಚನೆಗೆ ಒಳಗಾಗಿದ್ದರು. ವಿಧಾನ ಮಂಡಲದಲ್ಲಿ ಭಾರೀ ಪ್ರಮಾಣದ ಚರ್ಚೆಗಳಾದವು. ಆದರೆ ಯಾವುದೂ ಪ್ರಯೋಜನವಾಗಿಲ್ಲ. ಈವರೆಗೂ ವಂಚನೆಗೆ ಒಳಗಾದವರಿಗೆ ನ್ಯಾಯ ಸಿಕ್ಕಿಲ್ಲ. ಸಿಬಿಐಗೆ ವರ್ಗಾವಣೆಯಾಗಿದೆ ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸರು ತನಿಖೆಯನ್ನು ಕೈ ಬಿಟ್ಟಿದ್ದಾರೆ. ಠೇವಣಿದಾರರ ಪಾಡು ಹೇಳ ತೀರದಾಗಿದೆ.
ಅದೇ ರೀತಿ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ರ ಮಾರ್ಚ್‌ನಲ್ಲಿ ವಾಮಾನಾಚಾರ್ಯ ಹಾಗೂ ಇತರರು ವಶಿಷ್ಠ ಕ್ರೆಡಿಟ್ ಸೌಹಾರ್ಧ ಸಹಕಾರಿ ಲಿಮಿಟೆಡ್ ವಿರುದ್ಧ ದೂರು ಸಲ್ಲಿಸಿದ್ದು, ಬ್ಯಾಂಕ್ ದೊಡ್ಡ ಮೊತ್ತದ ಸಾಲಗಳಿಗೆ ಸರಿಯಾದ ಭದ್ರತೆ ಪಡೆದಿಲ್ಲ. ಆಡಳಿತ ಮಂಡಳಿಯವರು ಸೇರಿ 46 ಮಂದಿ ಹಣಕಾಸು ಸಂಸ್ಥೆಗೆ ವಂಚನೆ ದ್ರೋಹ ಮಾಡಿದ್ದಾರೆ. ಸಾರ್ವಜನಿಕರ ನೂರಾರು ಕೋಟಿ ವಂಚನೆಯಾಗಿದೆ ಎಂದು ಆರೋಪಿಸಿದ್ದರು. ಈ ಪ್ರಕರಣವೂ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಅತ್ತ ಸಿಬಿಐ ಕೂಡ ತನಿಖೆ ನಡೆಸಿಲ್ಲ, ಇತ್ತ ಸ್ಥಳೀಯ ಪೊಲೀಸರು ಗಮನ ಹರಿಸಿಲ್ಲ. ಮೂರು ವರ್ಷಗಳಿಂದಲೂ ಠೇವಣಿದಾರರ ಕಷ್ಟ ಕೇಳುವವರಿಲ್ಲವಾಗಿದೆ.
ಇನ್ನೂ ಕೇರಳ ಮೂಲದ ಪಾಫುಲರ್ ಫೈನಾಸ್ ಹಗರಣ ರಾಜ್ಯದಲ್ಲಿ ದೊಡ್ಡ ಸದ್ದು ಮಾಡಿತ್ತು. ಯಶವಂತಪುರದಲ್ಲಿ 47, ಹೆಚ್ ಎಸ್ ಆರ್ ಪೊಲೀಸ್ ಠಾಣೆಯಲ್ಲಿ ಐದು, ಸವನಗುಡಿ ಪೊಲೀಸ್ ಠಾಣೆಯಲ್ಲಿ ಮೂರು, ಜೈಭೀಮಾನಗರದಲ್ಲಿ ಎರಡು, ಮಡಿವಾಳ, ಮಾಗಡಿ, ಚಂದ್ರಾಲೇಔಟ್, ವಿದ್ಯಾರಣ್ಯಪುರ, ಯಲಹಂಕ, ಮಹದೇವಪುರ, ಸಂಪಗೀರಾಮನಗರ ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.
ಕೇರಳದ ಪಾಫುರಲ್ ಫೈನಾಸ್ ಶೇ.12ರಷ್ಟು ಬಡ್ಡಿ ನೀಡುವ ಆಮಿಷ ತೋರಿಸಿ ಸಾವಿರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಠೇವಣಿ ವಸೂಲಿ ಮಾಡಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವಾಗ ಏಕಾಏಕಿ ಬಾಗಿಲು ಬಂದ್ ಮಾಡಿಕೊಂಡು ನಾಪತ್ತೆಯಾಗಿತ್ತು.
ಸಂಸ್ಥೆಯ ಮುಖ್ಯಸ್ಥ ಮತಾಯಿಸ್ ಸೇರಿದಂತೆ ಅನೇಕರ ವಿರುದ್ಧ ಠೇವಣಿದಾರರು ದೂರು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದರು. ಪಾಫೂಲರ್ ಪೈನಾನ್ಸ್ ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇದೇ ರೀತಿ ವಂಚನೆ ಮಾಡಿರುವುದು ವರದಿಯಾಗಿತ್ತು. ಅಂತಾರಾಜ್ಯ ಗಡಿ ಇರುವ ಕಾರಣಕ್ಕೆ ಹಾಗೂ ಕೋಟ್ಯಂತರ ರೂಪಾಯಿ ಹಣ ದುರುಪಯೋಗ ಪ್ರಕರಣವಾಗಿರುವ ಕಾರಣಕ್ಕೆ ರಾಜ್ಯದ 64 ಪ್ರಕರಣಗಳನ್ನು ಸಿಬಿಐ ತನಿಖಗೆ ವಹಿಸಲಾಗಿತ್ತು. ಆದರೆ ಈವರೆಗೂ ತನಿಖೆ ಆರಂಭವಾಗಿಲ್ಲ. ಹಣಕಾಸು ನಷ್ಟ ಮಾಡಿಕೊಂಡವರಿಗೆ ನ್ಯಾಯ ಸಿಕ್ಕಿಲ್ಲ.
ಹಾಗೇಯೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಕೋ ಬ್ಯಾಂಕ್ ವಂಚನೆಗೆ ಸಂಬಂಧಿಸಿದ ಪ್ರಕರಣ ಮತ್ತು ರಾಯಚೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾದ ಕೆನರಾ ಬ್ಯಾಂಕ್ ಹಗರಣವೂ ಸಿಬಿಐಗೆ ವರ್ಗಾಯಿಸಲ್ಪಟ್ಟಿವೆ. ಈ ಯಾವ ಪ್ರಕರಣಗಳಲ್ಲೂ ತನಿಖೆ ಪ್ರಗತಿ ಕಂಡಿಲ್ಲ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಧರ್ಮಸ್ಥಳ ಪ್ರಕರಣದಲ್ಲಿ ನಡೆಯುತ್ತಿರುವುದು ಆರ್ ಎಸ್ ಎಸ್ ಒಳ ಜಗಳ. ಹಿಂದೆ ಬಿಜೆಪಿಯವರೇ ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಬೇಕು ಎಂದಿದ್ದರು, ಎಸ್‌ಐಟಿ ರಚನೆಯಾದಾಗಲೂ ಸುಮನಿದ್ದರು ಈಗ ಏಕಾಏಕಿ ಧರ್ಮಸ್ಥಳ ಚಲೋ ಮಾಡುತ್ತಿದ್ದಾರೆ. ಧರ್ಮಸ್ಥಳ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ ಈ ಹಿಂದೆ ಸಿಬಿಐ ಮಾನವ ಸಂಪನೂಲದ ಕೊರತೆಯ ಬಗ್ಗೆ ಪತ್ರ ಬರೆದಿತ್ತು, ಅದರಿಂದಾಗಿ ಸಿಬಿಐ ಮುಂದೆ ರಾಜ್ಯದ 74 ಪ್ರಕರಣಗಳ ತನಿಖೆ ಬಾಕಿ ಇವೆ. ಈ ಬಗ್ಗೆ ಬಿಜೆಪಿಯವರು ಏನು ಹೇಳುತ್ತಾರೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
- ಮಸೀದಿಯಲ್ಲಿ ಗಣೇಶ ಪ್ರತಿಷ್ಠಾಪನೆ
- ಮೈಸೂರಿಗೆ ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ನಾಳೆ ಅರಮನೆ-ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
- ತನಿಖೆಯಾಗದೆ ಸಿಬಿಐನಲ್ಲಿ ಬಾಕಿ ಉಳಿದ 74 ಗಂಭೀರ ಪ್ರಕರಣಗಳು, ಮರೀಚಿಕೆಯಾದ ನ್ಯಾಯ
- ಹಣೆಗೆ ತಿಲಕ ಧರಿಸಿ ತರಗತಿಗೆ ಬರದಂತೆ ಪ್ರಾಶುಂಪಾಲ ಸುತ್ತೋಲೆ : ಪೋಷಕರಿಂದ ಪ್ರತಿಭಟನೆ
- ಕಾಳೇಶ್ವರಂ ಯೋಜನೆ ಅಕ್ರಮವನ್ನು ಸಿಬಿಐ ತನಿಖೆಗೆ ವಹಿಸಿದ ರೇವಂತ್ ರೆಡ್ಡಿ