ಬೆಂಗಳೂರು, ಮೇ 3 – ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬಜಪೆ ಠಾಣೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಪತ್ತೆಗಾಗಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರು ಐದು ತಂಡಗಳನ್ನು ರಚಿಸಿದ್ದರು. ಈ ತಂಡಗಳು ಘಟನೆ ನಡೆದ ದಿನದಿಂದ ಇದುವರೆಗೂ ಹಲವು ಮಾತಿಗಳನ್ನು ಕಲೆಹಾಕಿ ಮಂಗಳೂರಿನಲ್ಲೇ ಅವಿತು ಕುಳಿತಿದ್ದ ಎಂಟು ಮಂದಿ ಶಂಕಿತರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿವೆ.
ಸುಹಾಸ್ ಶೆಟ್ಟಿಯನ್ನು ಏತಕ್ಕಾಗಿ ಕೊಲೆ ಮಾಡಿದ್ದಾರೆ, ಈ ಘಟನೆ ಹಿಂದೆ ಯಾರಿದ್ದಾರೆ, ಎಂಬಿತ್ಯಾದಿ ಮಾಹಿತಿಗಳನ್ನು ಆರೋಪಿಗಳಿಂದ ಬಾಯ್ದಿಡಿಸುತ್ತಿದ್ದಾರೆ. 2022 ರಲ್ಲಿ ನಡೆದಿದ್ದ ಫಾಜಿಲ್ ಕೊಲೆಗೆ ಪ್ರತಿಕಾರವಾಗಿ ಸುಹಾಸ್ ಕೊಲೆ ನಡೆಯಿತೇ ಅಥವಾ ಬೇರೆ ಏನಾದರೂ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ತನಿಖೆ ನಂತರವಷ್ಟೇ ಈತನ ಕೊಲೆಗೆ ನಿಖರ ಕಾರಣ ಬಯಲಾಗಬೇಕಿದೆ.
ಇದಲ್ಲದೇ ಸುಹಾಸ್ ಹತ್ಯೆ ನಡೆದ ಕೆಲವೇ ನಿಮಿಷಗಳಲ್ಲಿ ಫಿನೀಶ್ ಎಂಬ ಪೋಸ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಏಕೆ ಹಾಕಲಾಗಿತ್ತು, ಈ ಪೋಸ್ಟರ್ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆಯೂ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರಿಗೆ ಹಿಂದಿನಿಂದ ಮೀನಿನ ಗೂಡ್ಸ್ ವಾಹನದಿಂದ ಗುದ್ದಿಸಿ ನಂತರ ನಡು ರಸ್ತೆಯಲ್ಲೇ ಹಂತಕರ ಗುಂಪು ತಲ್ವಾರ್‌ಗಳಿಂದ ಮನಬಂದಂತೆ ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆ ಸಿಸಿ ಟಿವಿಯ ಪುಟೇಜ್‌ಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಸುಹಾಸ್ ಬರ್ಬರ ಹತ್ಯೆ ನಡೆಸಿದ್ದ ಪ್ರಮುಖ ಆರೋಪಿಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.
ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲು:
ಬಚ್ಛೆ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಪದವು ಬಳಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಸಂಬಂಧವಾಗಿ ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಹಾಗೂ ಗ್ರೂಪ್‌ಗಳು ಸಾಮಾಜಿಕ ಮಾಧ್ಯಮದ ಮೂಲಕ ದ್ವೇಷ ಭಾವನೆ ಹುಟ್ಟುವಂತೆ ಪೋಸ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.