Friday, November 22, 2024
Homeರಾಜ್ಯಶೇ.80 ರಷ್ಟು ಖಾಸಗಿ, ಸರ್ಕಾರಿ ಉದ್ಯೋಗ ಕನ್ನಡಿಗರಿಗೆ ಸಿಗಬೇಕು : ಕರವೇ ಪ್ರತಿಭಟನೆ

ಶೇ.80 ರಷ್ಟು ಖಾಸಗಿ, ಸರ್ಕಾರಿ ಉದ್ಯೋಗ ಕನ್ನಡಿಗರಿಗೆ ಸಿಗಬೇಕು : ಕರವೇ ಪ್ರತಿಭಟನೆ

ಬೆಂಗಳೂರು,ಜು.1- ಕೇಂದ್ರ ಮತ್ತು ರಾಜ್ಯಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗಗಳನ್ನು ಮೀಸಲಿಡಬೇಕೆಂದು ಆಗ್ರಹಿಸಿ ಅದಕ್ಕೆ ಅಗತ್ಯ ಕಾಯಿದೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆಯ ರಣಕಹಳೆ ಮೊಳಗಿಸಿದರು.

ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರೆ, ರಾಜ್ಯಾದ್ಯಂತ ಕಾರ್ಯಕರ್ತರು ಎಲ್ಲಾ ಜಿಲ್ಲಾ ಕೇಂದ್ರಗಳ ಬಳಿ ಪ್ರತಿಭಟನೆ ನಡೆಸಿ ಎಲ್ಲಾ ಹಂತದಲ್ಲೂ ಕನ್ನಡಿಗರಿಗೆ ಉದ್ಯೋಗ ನೀಡುವಂತಹ ಸೂಕ್ತ ಕಾಯಿದೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ತರುವುದು ಸೇರಿದಂತೆ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಶೇ.100 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಇತರೆ ವರ್ಗಗಳಲ್ಲಿ ಶೇ.80 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೇ ನೀಡಬೇಕೆಂಬ ಒತ್ತಾಯವನ್ನು ಮಂಡಿಸಲಾಯಿತು.

ಕರವೇ ಕರೆಕೊಟ್ಟ ಈ ಬೆಂಬಲಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು, ಕಲಾವಿದರು, ಚಲನಚಿತ್ರ ನಟ-ನಟಿಯರು ಬೆಂಬಲ ಘೋಷಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡು ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.

ಚಳುವಳಿಯ ನೇತೃತ್ವ ವಹಿಸಿದ್ದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾಡಿನ ನೆಲ, ಜಲ, ಸಂಸ್ಕೃತಿ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತಾ ಬಂದಿದೆ.

ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಇತ್ತೀಚೆಗೆ ಹೋರಾಟ ಮಾಡಿ ಅದರಲ್ಲಿ ಯಶಸ್ಸನ್ನು ಕಂಡಿದೆ. ಈಗ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಹೋರಾಟಕ್ಕಿಳಿದಿದೆ.ನಮ ರಾಜ್ಯದಲ್ಲಿ ನಮವರಿಗೇ ಉದ್ಯೋಗ ಕೊಡಿ ಎಂದು ಕೇಳಬೇಕಾದ ದುಸ್ಥಿತಿ ಬಂದಿರುವುದು ದುರದೃಷ್ಟಕರ. ಕನ್ನಡಿಗರು ಸಹನಾಶೀಲರು, ಶಾಂತಿಪ್ರಿಯರೂ ಆಗಿರುವುದರಿಂದ ಅನ್ಯಭಾಷಿಗರು ನಮವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನ ಎಲ್ಲಾ ಭಾಗಗಳಲ್ಲಿಯೂ ಕೂಡ ಬೇರೆ ಬೇರೆ ರಾಜ್ಯದವರು ಉದ್ಯೋಗಗಳನ್ನು ಆಕ್ರಮಿಸಿಕೊಂಡಿದ್ದಾರೆ. ಕನ್ನಡಿಗರ ಹಕ್ಕುಗಳನ್ನು ಹೊರರಾಜ್ಯಗಳಿಂದ ಬಂದವರು ಅನುಭವಿಸುತ್ತಿರುವುದರಿಂದ ನಮ ರಾಜ್ಯದಲ್ಲಿ ಕನ್ನಡಿಗರು ನಿರುದ್ಯೋಗಿಗಳಾಗಿ ಅಲೆಯುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ ನಾವೆಲ್ಲಾ ಒಂದಾಗಿ ಹೋರಾಟ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಈಗ ನಾವು ಸಿಡಿದೆದ್ದು ನಿಲ್ಲದಿದ್ದರೆ ಮುಂದೆ ಖಂಡಿತಾ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದಲ್ಲಿ ಸಂಪತ್ತು, ಉದ್ಯೋಗದ ಮೇಲೆ ಮೊದಲ ಹಕ್ಕು ಆದ್ಯತೆ ಕನ್ನಡಿಗರಿಗೆ ಸಿಗಬೇಕೆಂಬುದು ನಮ ಪ್ರತಿಪಾದನೆ. ಅದಕ್ಕಾಗಿ ನಾವು ಹೋರಾಟಕ್ಕೆ ಇಳಿದಿದ್ದೇವೆ. ಅದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ನಮ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ನಾರಾಯಣಗೌಡರು ಗುಡುಗಿದರು.ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಲಾಯಿತು.

RELATED ARTICLES

Latest News