ಬೆಂಗಳೂರು, ಅ.6- ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ. 80 ರಷ್ಟು ಮುಗಿದಿದ್ದು ಬಾಕಿ ಸಮೀಕ್ಷೆಗಾಗಿ ಇನ್ನೂ ಮೂರ್ನಾಲ್ಕು ದಿನ ಅವಧಿ ವಿಸ್ತರಣೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುತ್ತಿರುವ ಸಮೀಕ್ಷೆಗೆ ಎಲ್ಲರೂ ಸಹಕಾರ ನೀಡಬೇಕು. ಅನಗತ್ಯವಾಗಿ ಗೊಂದಲ ಮೂಡಿಸಬಾರದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಹಲವರಿಗೆ ಸಲಹೆ ನೀಡಿದರು.ಸಮೀಕ್ಷೆ ಹಲವಾರು ಜಿಲ್ಲೆಗಳಲ್ಲಿ ನಾನಾ ರೀತಿಯಲ್ಲಿ ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 70ರಷ್ಟು, 50 ರಷ್ಟು, 60 ರಷ್ಟು ಇನ್ನೂ ಕೆಲವು ಜಿಲ್ಲೆಗಳಲ್ಲಿ ಬಹುತೇಕ ಮುಗಿಯುವ ಹಂತದಲ್ಲಿದೆ.
ರಾಜ್ಯದ ಸರಾಸರಿ ಪರಿಗಣಿಸುವುದಾದರೆ ಶೇ.20 ರಿಂದ 25ರಷ್ಟು ಬಾಕಿಯಿರುವ ಸಾಧ್ಯತೆ ಇದೆ. ನಾಳೆ ಅ. 7ಕ್ಕೆ ಸಮೀಕ್ಷೆ ಪೂರ್ಣಗೊಳಿಸಲು ಗಡುವು ನಿಗದಿ ಪಡಿಸಲಾಗಿದ್ದು, ಅದು ನಾಳೆಗೆ ಮುಗಿಯುತ್ತಿದೆ. ಇನ್ನೂ ನಾಲ್ಕು ದಿನ ಅವಧಿ ವಿಸ್ತರಣೆ ಮಾಡಿದರೆ, ಸಮೀಕ್ಷೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳ ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ. ಸಂಜೆ ವೇಳೆಗೆ ವಾಪಸ್ ಬರಲಿದ್ದು, ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಜಿಲ್ಲಾವಾರು ಮಾಹಿತಿ ಪಡೆದು ಅವಧಿ ವಿಸ್ತರಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.
ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿರುವುದು ಕೇಂದ್ರ ಸಚಿವ ವಿ. ಸೋಮಣ್ಣ ಆಕ್ಷೇಪ ವ್ಯಕ್ತ ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರಿಬ್ಬರಷ್ಟೇ ಅಲ್ಲ, ನಮಗೂ ಕೆಲವು ವಿಚಾರಗಳ ಬಗ್ಗೆ ಅಸಮಾಧಾನಗಳಿವೆ.ಸಮೀಕ್ಷೆ ನಡೆಸುವಾಗ ಸಣ್ಣ ಪುಟ್ಟ ಗೊಂದಲಗಳಾಗುತ್ತವೆ. ಅದರ ಹೊರತಾಗಿಯೂ ಎಲ್ಲರೂ ಸಹಕಾರ ನೀಡಬೇಕು. ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಬೆಂಬಲಿಸಬೇಕು ಎಂದು ಸಲಹೆ ನೀಡಿದರು.
ಈ ಹಿಂದೆ ಕಾಂತರಾಜು ಆಯೋಗದ ಸಮೀಕ್ಷೆ ನಡೆಸುವಾಗಿನ ಅನುಭವಗಳನ್ನು ಆಧರಿಸಿ, ಈ ಬಾರಿ ಕ್ರಮ ಕೈಗೊಂಡಿದ್ದೇವೆ. ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗುವುದಿಲ್ಲ ಎಂದು ಹೇಳಿದರು.ಗ್ರೇಟರ್ ಬೆಂಗಳೂರನ್ನು ತುಮಕೂರಿಗೆ ವಿಸ್ತರಣೆ ಮಾಡುವ ಬದಲಾಗಿ ತುಮಕೂರನ್ನೇ ಗ್ರೇಟರ್ ನಗರವನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
5 ವರ್ಷ ತಾವೇ ಮುಖ್ಯಮಂತ್ರಿಯಾಗಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮಾಧ್ಯಮಗಳಲ್ಲಿನ ಚರ್ಚೆಯಿಂದಾಗಿ ಈ ವಿಚಾರ ಪ್ರಚಲಿತಕ್ಕೆ ಬರುತ್ತಿದೆ ಎಂದರು.
ತನಿಖೆ ಪ್ರಗತಿಯಲ್ಲಿ:
ಧರ್ಮಸ್ಥಳದ ಪ್ರಕರಣಗಳಿಗೆ ಸಂಬಂಧಪಟ್ಟಂತೆ ತನಿಖೆ ಪ್ರಗತಿಯಲ್ಲಿದೆ. ಇಂತಿಷ್ಟೇ ಕಾಲಾವಧಿಯಲ್ಲಿ ವಿಚಾರಣೆ ಮುಗಿಸಿ ವರದಿ ಕೊಡಿ ಎಂದು ಒತ್ತಡ ಹೇರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಹಲವಾರು ಮಾದರಿಗಳನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಕೆಮಿಕಲ್ ಅನಾಲಿಸಿಸ್, ಡಿಎನ್ಎ ಪರೀಕ್ಷೆ ಸೇರಿದಂತೆ ನಾನಾ ರೀತಿಯ ಪ್ರಕ್ರಿಯೆಗಳಿವೆ. ಡಿಎನ್ಎ ಪರೀಕ್ಷೆಯಲ್ಲಿ ತರಾತುರಿ ವರದಿ ಪಡೆಯಲು ಕಷ್ಟಸಾಧ್ಯ. ಆದರೆ ಆದ್ಯತೆ ಮೇರೆಗೆ ವರದಿ ನೀಡಲು ಎಸ್ಎಫ್ಎಲ್ಗೆ ಸೂಚಿಸಲಾಗಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಕಾನ್್ಸಟೆಬಲ್ ಮತ್ತು ಪಿಎಸ್ಐ ಹುದ್ದೆಗಳ ನೇಮಕಾತಿಯ ವೇಳೆ ಶಾಶ್ವತವಾಗಿ ವಯೋಮಿತಿಯನ್ನು ಸಡಿಲಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸರ್ಕಾರ ಅದನ್ನು ಪರಿಶೀಲಿಸುತ್ತಿದೆ. ವಿವಿಧ ರಾಜ್ಯಗಳ ವರದಿ ಪಡೆದಿದ್ದು, ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ವಾರ ಅಥವಾ 10 ದಿನಗಳ ಒಳಗಾಗಿ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.ಈಗಾಗಲೇ ಮುಖ್ಯಮಂತ್ರಿ ಅವರು 3 ವರ್ಷಗಳಿಗೆ ಸೀಮಿತವಾಗಿ ವಯೋಮಿತಿ ಸಡಿಲಿಕೆ ಮಾಡಿದ್ದಾರೆ. ಶಾಶ್ವತವಾಗಿ ವಯೋಮಿತಿ ಸಡಿಲಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.