Friday, August 22, 2025
Homeಇದೀಗ ಬಂದ ಸುದ್ದಿಅಕ್ರಮ ಗಣಿಗಾರಿಕೆಯಿಂದ 80 ಸಾವಿರ ಕೋಟಿ ನಷ್ಟ

ಅಕ್ರಮ ಗಣಿಗಾರಿಕೆಯಿಂದ 80 ಸಾವಿರ ಕೋಟಿ ನಷ್ಟ

80 thousand crore loss due to illegal mining

ಬೆಂಗಳೂರು,ಆ.22- ರಾಜ್ಯದಲ್ಲಿ 2006 ರಿಂದ 2012 ರವರೆಗೆ ನಡೆದ ಅಕ್ರಮ ಗಣಿಗಾರಿಕೆಯಿಂದ ವಿದೇಶಕ್ಕೆ ಕಾನೂನು ಬಾಹಿರವಾಗಿ ಕಬ್ಬಿಣ ಅದಿರು ರಫ್ತು ಮಾಡಿದ ಕಾರಣ ಬೊಕ್ಕಸಕ್ಕೆ 80 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ವಿಧಾನಪರಿಷತ್‌ನಲ್ಲಿ ಬಹಿರಂಗಪಡಿಸಿದ್ದಾರೆ.

ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ಕರ್ನಾಟಕ ಅಕ್ರಮ ಗಣಿಗಾರಿಕೆಯ ಆಸ್ತಿ ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಮಸೂದೆ 2005 ಯನ್ನು ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಮಂಡಿಸಿ ವಿವರಣೆ ನೀಡಿದರು.

2006, 2011 ಮತ್ತು 2012 ರ ವೇಳೆ ರಾಜ್ಯದ ವಿವಿಧೆಡೆ ಕಾನೂನು ಬಾಹಿರವಾಗಿ ಅಕ್ರಮ ಗಣಿಗಾರಿಕೆ ನಡೆಸಲಾಗಿದೆ. ಒಟ್ಟು 80 ಸಾವಿರ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಚೀನಾ, ಪಾಕಿಸ್ತಾನ ಸೇರಿದಂತೆ ಹೊರರಾಷ್ಟ್ರಗಳಿಗೆ ರಫ್ತು ಮಾಡಿದ ಪರಿಣಾಮ 80 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬುದನ್ನು ಒಪ್ಪಿಕೊಂಡರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಅವರು ಸರ್ಕಾರಕ್ಕೆ ನೀಡಿದ್ದ ವರದಿಯಲ್ಲಿ ವಿದೇಶಕ್ಕೆ ರಫ್ತು ಮಾಡಿರುವ ಕಬ್ಬಿಣದ ಅದಿರು ಮಾಹಿತಿ ಕುರಿತು ಸವಿಸ್ತಾರ ವರದಿಯನ್ನು ನೀಡಿದ್ದಾರೆ. ಪ್ರತಿ ಮೆಟ್ರಿಕ್‌ ಟನ್‌ ಅದಿರಿಗೆ 4,300 ಕೋಟಿ ರೂ.ನಂತೆ ಒಟ್ಟು 80 ಸಾವಿರ ಮೆಟ್ರಿಕ್‌ ಟನ್‌ ಅದಿರು ರಫ್ತು ಮಾಡಲಾಗಿದೆ. ಇದನ್ನು ವಶಪಡಿಸಿಕೊಳ್ಳುವುದು ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯ ಕರ್ತವ್ಯ ಎಂದರು.

ಈ ಅವಧಿಯಲ್ಲಿ ಗಣಿಗಾರಿಕೆ ನಡೆಸುವವರು ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ಒಂದು ಕಾಲದಲ್ಲಿ ರಾಜ್ಯಪಾಲರ ಕಾರು ಮತ್ತು ಅವರ ಬೆಂಗಾವಲು ವಾಹನಗಳು ಹೋಗುತ್ತಿದ್ದ ವೇಳೆ ಅದನ್ನು ಲೆಕ್ಕಿಸದೆ ಲಾರಿಯು ಸಾಗಾಣಿಕೆ ನಡೆಸಿರುವ ನಿದರ್ಶನವಿದೆ. ಇದು ನಾವು ಕಡಿವಾಣ ಹಾಕದಿದ್ದರ ಪರಿಣಾಮ ಎಂದು ವಿಷಾದಿಸಿದರು.

ಈ ಹಿಂದೆ ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ವಂಚನೆ ಮಾಡಿದ ಹರ್ಷದ್‌ ಮೆಹ್ತಾ ಪ್ರಕರಣವನ್ನು ತನಿಖೆ ಮಾಡಿಸಿದಾಗ 7 ಸಾವಿರ ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಯಿತು. ಈಗ ಅಕ್ರಮ ಗಣಿಗಾರಿಕೆ ನಡೆಸಿರುವವರ ಮೇಲೂ ಕಾನೂನು ಪ್ರಕಾರ ಕ್ರಮ ಕೈಗೊಂಡು ವಶಪಡಿಸಿಕೊಳ್ಳಬೇಕು. ಇದಕ್ಕಾಗಿ ಈ ವಿಧೇಯಕವನ್ನು ಜಾರಿಗೆ ತಂದಿದ್ದೇವೆ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಸಮರ್ಥನೆ ಮಾಡಿಕೊಂಡರು.

ಈ ವಿಧೇಯಕದ ಬಗ್ಗೆ ಸಚಿವ ಸಂಪುಟ ಸಭೆ ಹಾಗೂ ಸಚಿವ ಸಂಪುಟದ ಉಪಸಮಿತಿಯಲ್ಲೂ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವುದನ್ನು ಹುಸಿ ಮಾಡಲೇಬೇಕು. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ವಿಧೇಯಕದ ಮೇಲೆ ಸದಸ್ಯರಾದ ಐವಾನ್‌ ಡಿಸೋಜ, ಟಿ.ಎ.ಶರವಣ, ವೈ.ಎಂ.ಸತೀಶ್‌ ಮತ್ತಿತರ ಸದಸ್ಯರು ಮಾತನಾಡಿ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದರು.

ವಿಧೇಯಕ ಅನುಮೋದನೆ :
ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದು ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಅನುಮೋದನೆ ನೀಡಲಾಯಿತು. ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶ ಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಿ ಆಯುಕ್ತರನ್ನು ನೇಮಿಸುವ ಸಂಬಂಧಪಟ್ಟ ವಿಧೇಯಕ ಇದಾಗಿದೆ.

ಅಕ್ರಮ ಗಣಿಗಾರಿಕೆಯ ಆಸ್ತಿ ವಶಪಡಿಸಿಕೊಳ್ಳಲು ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕ ಮಸೂದೆ 2005, ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದ ಪಡೆದ ಆಸ್ತಿಗಳನ್ನು ವಶಪಡಿಸಿಕೊಳ್ಳಲು, ಜಪ್ತಿ ಮಾಡಲು ಆಯುಕ್ತರ ನೇಮಕಕ್ಕೆ ಅವಕಾಶ ನೀಡುತ್ತದೆ. ವಸೂಲಾತಿ ಪ್ರಕ್ರಿಯೆಗಳನ್ನು ಮೇಲ್ವಿಚಾರಣೆ ಮಾಡಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಕಮಿಷನರ್‌ ಆಗಿ ನೇಮಿಸಲಾಗುತ್ತದೆ.

ರಾಜ್ಯದಲ್ಲಿ ಲೆಕ್ಕವಿಲ್ಲದಷ್ಟು ಗುತ್ತಿಗೆದಾರರು, ಸಾಗಾಣಿಕೆದಾರರು, ರಫ್ತುದಾರರು, ದಾಸ್ತಾನು ಧಾರಕರು, ಖರೀದಿದಾರರು ಮತ್ತು ಮಧ್ಯವರ್ತಿಗಳು ಸೇರಿದಂತೆ ಬಹು ವಹಿವಾಟುಗಳಿಂದ ಅಕ್ರಮ ಗಣಿಗಾರಿಕೆ ಚಟುವಟಿಕೆಗಳು ನಡೆದಿವೆ. ಅದು ವ್ಯವಸ್ಥಿತ ಒಳಸಂಚು ಹೊಂದಿರುವ ಸಂಘಟಿತ ಅಪರಾಧ. ಇದರಿಂದ ಸರ್ಕಾರಕ್ಕಾಗಿರುವ ನಷ್ಟದ ವಸೂಲಾತಿಗೆ ವಿಧೇಯಕ ಜಾರಿಗೊಳಿಸಲಾಗುತ್ತಿದೆ.

ಇದಕ್ಕಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ದರ್ಜೆಗಿಂತ ಕಡಿಮೆಯಿಲ್ಲದ, ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಯನ್ನು ವಸೂಲಾತಿ ಆಯುಕ್ತರನ್ನಾಗಿ ನೇಮಕ ಮಾಡಲು ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ನೇಮಕವಾಗುವ ವಸೂಲಾತಿ ಆಯುಕ್ತರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಅಥವಾ ಮುಟ್ಟುಗೋಲು ಮತ್ತು ವಸಲಾತಿ ಕಾರ್ಯಾಚರಣೆಗಳ ಮೇಲೆ ಒಟ್ಟಾರೆ ಮೇಲ್ವಿಚಾರಣಾ ಅಧಿಕಾರವನ್ನು ಹೊಂದಿರುತ್ತಾರೆ. ಅದರ ಜತೆಗೆ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಬರುವ ದೂರುಗಳನ್ನು, ದಾಖಲೆ, ವರದಿಯನ್ನು ಪರಿಶೀಲಿಸಬೇಕು. ಅಲ್ಲದೆ, ಸ್ವತ್ತುಗಳ ಜಪ್ತಿಗೆ ಹೊರಡಿಸುವ ಎಲ್ಲ ಮುಟ್ಟುಗೋಲು ಆದೇಶಗಳನ್ನು ರಾಜ್ಯ ಸರ್ಕಾರದಿಂದ ದೃಢೀಕರಿಸಿಕೊಳ್ಳಬೇಕು. ಅದರ ಜತೆಗೆ ಜಪ್ತಿ ಅಥವಾ ಮುಟ್ಟುಗೋಲಿಗೂ ಮುನ್ನ ಕಾನೂನು ಪ್ರಕಾರ ಸೂಚನೆಗಳನ್ನು ಪಾಲಿಸಬೇಕು ಎಂಬ ನಿಯಮ ವಿಧೇಯಕದಲ್ಲಿದೆ.

RELATED ARTICLES

Latest News