ಬೆಂಗಳೂರು,ಮಾ.26- ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದನಂತರ 83 ಕಾಯ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 22 ತಿಂಗಳ ಅವಧಿಯಲ್ಲಿ ನಮ ಇಲಾಖೆ ಸಂತೃಪ್ತಿ ತರುವ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಗ್ರೇಟರ್ ಬೆಂಗಳೂರು, ಮೈಕ್ರೋ ಫೈನಾನ್ಸ್ , ಬೆಂಗಳೂರು ಅರಮನೆ ಸೇರಿದಂತೆ 28 ವಿಧೇಯಕಗಳನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿದೆ ಎಂದರು.
ವಿಧಾನಮಂಡಲದಲ್ಲಿ ಅಂಗೀಕಾರಗೊಂಡ 28 ವಿಧೇಯಕಗಳಲ್ಲಿ 5 ವಿಧೇಯಕಗಳಿಗೆ ರಾಜ್ಯಪಾಲರ ಅಂಕಿತವೂ ದೊರೆತಿದೆ ಎಂದು ಹೇಳಿದರು. 2023ರ ಆಗಸ್ಟ್ ನಂತರ 22 ವಿಧೇಯಕಗಳನ್ನು ಪರಿಶೀಲನಾ ಸಮಿತಿಯಿಂದ ಅನುಮೋದಿಸಿದ್ದು, 17 ವಿಧೇಯಕಗಳು ಉಭಯ ಸದನಗಳಲ್ಲಿ ಅನುಮೋದನೆ ಪಡೆದು ಅಧಿನಿಯಮಗಳಾಗಿ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟವಾಗಿವೆ. 2024ರಲ್ಲಿ 47 ವಿಧೇಯಕಗಳು ಅಧಿನಿಯಮಗಳಾಗಿ ಪ್ರಕಟವಾಗಿವೆ ಎಂದರು.
2025ರಲ್ಲಿ 41 ವಿಧೇಯಕಗಳನ್ನು ಪರಿಶೀಲನಾ ಸಮಿತಿ ಅನುಮೋದಿಸಿದ್ದು, 28 ವಿಧೇಯಕಗಳು ಎರಡೂ ಸದನದಲ್ಲಿ ಅಂಗೀಕಾರಗೊಂಡಿವೆ ಎಂದು ಹೇಳಿದರು.
ರಾಜ್ಯಪಾಲರಿಂದ ಇನ್ನು ಸುಮಾರು 11 ವಿಧೇಯಕಗಳು ಅನುಮೋದನೆ ಆಗಬೇಕಿದೆ. 7 ವಿಧೇಯಕಗಳಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಕೋರಿದ್ದಾರೆ. 5 ವಿಧೇಯಕಗಳು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಬಾಕಿ ಉಳಿದಿವೆ. 20 ವಿಧೇಯಕಗಳನ್ನು ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಒಟ್ಟಾರೆ 119 ವಿಧೇಯಕಗಳನ್ನು ಕಳುಹಿಸಿದ್ದು, 110 ವಿಧೇಯಕಗಳು ಅಧಿನಿಯಮವಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಕಾನೂನು ನೀತಿಯನ್ನು ಜಾರಿಗೆ ತಂದು ಕಾನೂನು ಸುಧಾರಣೆಗೆ ಒತ್ತು ಕೊಟ್ಟಿದ್ದೇವೆ. ಬಡವರ ಪ್ರಕರಣಗಳಲ್ಲಿ ಆರು ತಿಂಗಳಲ್ಲಿ ಇತ್ಯರ್ಥಪಡಿಸುವ ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದೆ. ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಧೇಯಕಕ್ಕೆ ಅನುಮತಿ ಬೇಕಿದೆ ಎಂದು ಅವರು ಹೇಳಿದರು.
ಸಾಮಾಜಿಕ ನ್ಯಾಯ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವುದು, ತಂಬಾಕು ಬೆಳೆಗಾರರ ಹಿತ ಕಾಪಾಡುವುದು, ವಕೀಲರ ಮೇಲಿನ ಹಿಂಸಾಚಾರ ತಡೆಯುವುದು, ಪರೀಕ್ಷಾ ಅಕ್ರಮ ತಡೆಯಲು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸುವಂತಹ ವಿಧೇಯಕಗಳನ್ನು ತಂದಿದ್ದೇವೆ ಎಂದು ಹೇಳಿದರು.