ಬೆಂಗಳೂರು, ಅ.13– ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ 8429.23 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದು ಕಳೆದ ಐದು ತಿಂಗಳಲ್ಲಿ ಅಧಿಕವಾಗಿದೆ.ವಾಣಿಜ್ಯ ತೆರಿಗೆಗಳ ಇಲಾಖೆ ಮಾಹಿತಿ ಪ್ರಕಾರ ಏಪ್ರಿಲ್‌ನಲ್ಲಿ 9662.80 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು. ನಂತರ ಸೆಪ್ಟೆಂಬರ್ ನಲ್ಲಿ ಮಾತ್ರ 8 ಸಾವಿರ ಕೋಟಿ ರೂ.ಗಿಂತ ಹೆಚ್ಚು ಸಂಗ್ರಹವಾಗಿದೆ. ಮೇನಿಂದ ಆಗಸ್ಟ್ ವರೆಗೆ ಯಾವ ತಿಂಗಳಲ್ಲೂ ವಾಣಿಜ್ಯ ತೆರಿಗೆ ಸಂಗ್ರಹ 8 ಸಾವಿರ ಕೋಟಿ ರೂ.ಗಿಂತ ಅಧಿಕವಾಗಿರಲಿಲ್ಲ.
ಆಗಸ್ಟ್ ತಿಂಗಳ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ 450.54 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಆಗಸ್ಟ್ನಲ್ಲಿ 7978.69 ಕೋಟಿ ರೂ. ಸಂಗ್ರಹವಾಗಿತ್ತು. ಸಪ್ಟೆಂಬರ್‌ನಲ್ಲಿ 6330.05 ಕೋಟಿ ರೂ. ಸರಕು ಸೇವಾ ತೆರಿಗೆ, 2012.32 ಕೃಷಿ ಮಾರಾಟ ತೆರಿಗೆ ಹಾಗೂ 86.86 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರವಾಗಿದೆ. ಇದು ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೂ ಹೆಚ್ಚಾಗಿದೆ. 2023ರ ಸೆಪ್ಟೆಂಬರ್‌ನಲ್ಲಿ 7075.02 ರಷ್ಟು ಮಾತ್ರ ವಾಣಿಜ್ಯ ತೆರಿಗೆ ಸಂಗ್ರಹವಾಗಿತ್ತು
2024-25ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 49290.35 ಕೋಟಿ ರೂ. ವಾಣಿಜ್ಯ ತೆರಿಗೆಗಳ ಸಂಗ್ರಹವಾಗಿದೆ. ಇದರಲ್ಲಿ 37310.78 ಕೋಟಿ ರೂ. ಸರಕು ಸೇವಾ ತೆರಿಗೆ, 11277.31 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 702.26 ಕೋಟಿ ರೂ.ವೃತ್ತಿ ತೆರಿಗೆ ಸೇರಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಒಟ್ಟು 94363.27 ಕೋಟಿ ರೂ. ವಾಣಿಜ್ಯ ತೆರಿಗಳ ಸಂಗ್ರಹವಾಗಿತ್ತು. ಇದರಲ್ಲಿ 72452.77 ಕೋಟಿ ರೂ. ಸರಕು ಸೇವಾ ತೆರಿಗೆ, 20578.51 ಕೋಟಿ ರೂ. ಕರ್ನಾಟಕ ಮಾರಾಟ ತೆರಿಗೆ ಹಾಗೂ 1331.99 ಕೋಟಿ ರೂ.ವೃತ್ತಿ ತೆರಿಗೆ ಒಳಗೊಂಡಿದೆ.