Friday, December 20, 2024
Homeರಾಜ್ಯಸಕ್ಕರೆ ನಾಡಲ್ಲಿ ಕನ್ನಡ ಉತ್ಸವಕ್ಕೆ ಚಾಲನೆ, ಮೊಳಗಿದ ಕನ್ನಡ ಕಹಳೆ, ಸಾಹಿತ್ಯ ಸಂಭ್ರಮ

ಸಕ್ಕರೆ ನಾಡಲ್ಲಿ ಕನ್ನಡ ಉತ್ಸವಕ್ಕೆ ಚಾಲನೆ, ಮೊಳಗಿದ ಕನ್ನಡ ಕಹಳೆ, ಸಾಹಿತ್ಯ ಸಂಭ್ರಮ

87th Kannada Sahitya Sammelana at Mandya

ಮಂಡ್ಯ,ಡಿ.20- ಸಕ್ಕರೆಯ ನಾಡು, ಅಕ್ಕರೆಯ ಬೀಡು, ಕಾವೇರಿ ನೆಲೆವೀಡು ಮಂಡ್ಯದಲ್ಲಿ ಸಾಹಿತ್ಯ ಸಂಭ್ರಮ ಮನೆ ಮಾಡಿತ್ತು. ಇಂದಿ ನಿಂದ ಆರಂಭಗೊಂಡ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನಕ್ಕೆ ನಾಡಿನ ಮೂಲೆ ಮೂಲೆ ಗಳಿಂದ, ದೇಶ-ವಿದೇಶಗಳಿಂದ ಜನಸಾಗರವೇ ಹರಿದುಬಂದಿತ್ತು. ಎಲ್ಲೆಡೆ ಕನ್ನಡದ ಕಹಳೆ ಮೊಳಗಿತ್ತು.

ಇಂದಿನಿಂದ ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆಗೆ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಬೆಳಗ್ಗೆ 6.30ಕ್ಕೆ ಸಮೇಳನದ ಸರ್ವಾಧ್ಯಕ್ಷರಾದ ಜಾನಪದ ವಿದ್ವಾಂಸರು, ನಾಡೋಜ ಗೊ.ರು.ಚನ್ನಬಸಪ್ಪ ಅವರ ಉಪಸ್ಥಿತಿಯಲ್ಲಿ ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎನ್‌.ಚಲುವರಾಯಸ್ವಾಮಿ ಅವರು ರಾಷ್ಟ್ರ ಧ್ವಜಾರೋಹಣ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಹಾಗೂ ಸಮೇಳನ ಸ್ವಾಗತ ಸಮಿತಿಯ ಗೌರವ ಕಾರ್ಯದರ್ಶಿ ನಾಡೋಜ ಡಾ.ಮಹೇಶ್‌ ಜೋಷಿ, ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣ ನೆರವೇರಿಸಿದರೆ, ಮಂಡ್ಯ ಜಿಲ್ಲಾ ಕಸಾಪ ಸಂಚಾಲಕಿ ಮೀರಾ ಶಿವಲಿಂಗಯ್ಯ ಅವರು ನಾಡಧ್ವಜಾರೋಹಣ ನೆರವೇರಿಸಿದರು.ವೈಭವದ ಮೆರವಣಿಗೆ, ಪೂರ್ಣಕುಂಭ ಸ್ವಾಗತ, ಜಾನಪದ ಕಲಾತಂಡಗಳ ಪ್ರದರ್ಶನದ ಮೂಲಕ ಸಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರನ್ನು ವೇದಿಕೆಗೆ ಕರೆತರಲಾಯಿತು.

ಸಮೇಳನ ಅಧ್ಯಕ್ಷರ ಮೆರವಣಿಗೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್‌. ಚಲುವರಾಯಸ್ವಾಮಿ ಚಾಲನೆ ನೀಡಿದರು.
ಕಸಾಪ ಅಧ್ಯಕ್ಷ ಮಹೇಶ್‌ ಜೋಷಿ, ಶಾಸಕರಾದ ಗಣಿಗ ರವಿ, ರಮೇಶ್‌ ಬಂಡಿಸಿದ್ದೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂದಿಧ್ವಜ, ಚಕ್ಕಡಿಗಾಡಿ, ಕೊಂಬುಕಹಳೆ, ನಾದಸ್ವರ, ಸ್ತಬ್ದಚಿತ್ರ, ವೀರಗಾಸೆ, ತಮಟೆ, ಕಂಸಾಳೆ, ಮಹಿಳಾ ವೀರಗಾಸೆ, ಜಗ್ಗಲಿ ಮೇಳ, ಪೂರ್ಣಕುಂಭ, ನಗಾರಿ, ಛತ್ರಿಚಾಮರ, ಕಾಸಾಬೇಡರ ಪಡೆ, ಹಗಲುವೇಷ, ಕೋಲಾಟ, ಗಾರುಡಿಗೊಂಬೆ, ಕರಗ, ಚಿಲಿಪಿಲಿ ಗೊಂಬೆ, ಚಿಟ್ಟಲಗಿ ಮೇಳ ಯಕ್ಷಗಾನದ ಮೇಳ, ವಾನರ ಸೇನೆ, ಕರಡಿ ಮಜಲು, ಕೀಲುಕುದುರೆ, ಸೋಮನಕುಣಿತ, ಗೊರವರ ಕುಣಿತ, ಲಂಬಾಣಿ ನೃತ್ಯ, ವೀರಮಕ್ಕಳ ಕುಣಿತ ರಾಜ್ಯದ ವಿವಿಧ ಸಾಂಸ್ಕೃತಿಕ ತಂಡಗಳು, ಸ್ಕೌಟ್‌ ಮತ್ತು ಗೈಡ್‌್ಸ, ಎನ್‌ಸಿಸಿ, ಭಾರತ್‌ ಸೇವಾದಳ, ನೂರಾರು ಆಟೋ ರಿಕ್ಷಾಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಸಮೇಳನಕ್ಕೆ ಮೆರಗು ತಂದಿದ್ದವು. ಹೊರರಾಜ್ಯದ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಎಲ್ಲೆಡೆ ಕನ್ನಡದ ಬಾವುಟಗಳು :
ಮಂಡ್ಯದಲ್ಲಷ್ಟೇ ಅಲ್ಲ ಬೆಂಗಳೂರಿನಿಂದ ಮೈಸೂರು ರಸ್ತೆವರೆಗೆ ಎಲ್ಲೆಡೆ ಕನ್ನಡದ ಬಾವುಟಗಳು, ಸಾಹಿತ್ಯ ಸಮೇಳನಕ್ಕೆ ಸ್ವಾಗತಿಸುವ ಕಟೌಟ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಇಂದಿನಿಂದ ಮೂರು ದಿನಗಳ ಕಾಲ ಮಂಡ್ಯದ ಸ್ಯಾಂಜೋ ಆಸ್ಪತ್ರೆ ಹಾಗೂ ಹೋಟೆಲ್‌ ಅಮರಾವತಿ ಮುಂಭಾಗ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಹಿನ್ನೆಲೆಯಲ್ಲಿ ಎಲ್ಲವೂ ಕನ್ನಡಮಯವಾಗಿದೆ. ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.

ಸ್ವಾಗತ ಕಮಾನುಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳನ್ನು ಹಾಕಿ ಸಿಂಗಾರಗೊಳಿಸಲಾಗಿದೆ. ರಾಜಮಾತೆ ಕೆಂಪನಂಜಮಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರಧಾನ ವೇದಿಕೆ, ಸರ್‌.ಎಂ.ವಿಶ್ವೇಶ್ವರಯ್ಯ ಮತ್ತು ಸರ್‌.ಮಿರ್ಜಾಯಿ ಇಸಾಯಿಲ್‌ ಮಹಾಮಂಟಪ, ಯಕ್ಷಕವಿ ಕೆಂಪಣ್ಣ ಗೌಡ ಮತ್ತು ಉಭಯ ಕವಿತವಿಶಾರದ ಷಡಕ್ಷರ ದೇವ ಮಹಾದ್ವಾರ, ಶ್ರೇಷ್ಠ ರಾಜಕೀಯ ಮುತ್ಸದ್ಧಿ ಎಸ್‌‍.ಎಂ.ಕೃಷ್ಣ ಮತ್ತು ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಪ್ರವೇಶದ್ವಾರ, ಎಲ್ಲೆಡೆ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.

ರಾಜ್ಯದ ಮೂಲೆ ಮೂಲೆಗಳಿಂದ, ದೇಶ-ವಿದೇಶಗಳಿಂದ ಆಗಮಿಸಿದ ಸಾಹಿತ್ಯಾಭಿಮಾನಿಗಳು ಸಂತಸದಿಂದ ಕನ್ನಡ ಸಾಹಿತ್ಯ ಸಮೇಳನದಲ್ಲಿ ಭಾಗವಹಿಸಿ ಕನ್ನಡದ ಸಂಭ್ರಮದಲ್ಲಿ ಪಾಲ್ಗೊಂಡರು. ಮಂಡ್ಯ ಜಿಲ್ಲೆಯ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಲು ಮತ್ತು ಶಿಕ್ಷಕ ವೃಂದ ಹಾಗೂ ಸರ್ಕಾರಿ ನೌಕರರು ಅಧಿಕ ಸಂಖ್ಯೆಯಲ್ಲಿ ಸಮೇಳನದಲ್ಲಿ ಭಾಗವಹಿಸಿದ್ದರು.

ಉಚಿತ ಬಸ್‌‍ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದರಿಂದ ಹೆಚ್ಚಿನ ಜನರು ಸಮೇಳನಕ್ಕೆ ಬರಲು ಅನುವಾಯಿತು.
ಹೊರ ಜಿಲ್ಲೆಗಳ ಸರ್ಕಾರಿ ಕಚೇರಿಗಳ ನೌಕರರಿಗೆ ಸಾಂಧರ್ಭಿಕ ರಜೆ ಮಂಜೂರು ಮಾಡಿದ್ದರಿಂದ ಅವರೂ ಹೆಚ್ಚಿನ ಸಂಖ್ಯೆಯಲ್ಲಿ ಸಮೇಳನದಲ್ಲಿ ಪಾಲ್ಗೊಂಡು ಕನ್ನಡ ಪ್ರೇಮ ಮೆರೆದರು.

ಸಾಹಿತ್ಯ ಸಮೇಳನದ ಸಂಭ್ರಮಕ್ಕೆ ಮೆರುಗು ನೀಡಿದ ಕೆಆರ್‌ಎಸ್‌‍ ಜಲಾಶಯ
ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಕೆಆರ್‌ಎಸ್‌‍ ಜಲಾಶಯ ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿರುವುದು ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿದಂತಾಗಿದೆ.
ಮಂಡ್ಯ ಜಿಲ್ಲೆಯ ಜೀವನಾಡಿಯಾಗಿರುವ ಈ ಜಲಾಶಯ ಡಿಸೆಂಬರ್‌ 3ನೇ ವಾರದಲ್ಲೂ ಗರಿಷ್ಠ ಪ್ರಮಾಣದಲ್ಲಿ ಭರ್ತಿಯಾಗಿದೆ. ಇನ್ನು 2000 ಕ್ಯೂಸೆಕ್‌ಗೂ ಹೆಚ್ಚು ಒಳಹರಿವು ಇರುವುದರಿಂದ ಹೆಚ್ಚು ಕಡಿಮೆ ಈ ಮಾಸಾಂತ್ಯದವರೆಗೂ ಇದೇ ಪ್ರಮಾಣದ ನೀರು ಜಲಾಶಯದಲ್ಲಿ ಸಂಗ್ರಹವಾಗಿರುವ ಸಾಧ್ಯತೆಗಳಿವೆ.

ಕಳೆದ ಬಾರಿ ತೀವ್ರ ಬರದಿಂದಾಗಿ ಜಲಾಶಯ ಭರ್ತಿಯಾದರೆ ಕುಡಿಯುವ ನೀರು ಹಾಗೂ ಕೃಷಿ ಬೆಳೆಗಳಿಗೆ ಸಂಕಷ್ಟ ಎದುರಾಗಿತ್ತು. ಆದರೆ ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಕಾವೇರಿ ಜಲಾಯನ ಭಾಗದಲ್ಲಿ ಉತ್ತಮವಾಗಿ ಬಿದ್ದಿರುವ ಹಿನ್ನಲೆಯಲ್ಲಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಸಾಧ್ಯವಾಯಿತು. ತಮಿಳುನಾಡಿಗೆ ಬಿಡಬೇಕಾದ ನಿಗದಿತ ಪ್ರಮಾಣಕ್ಕಿಂತಲೂ ಈ ಬಾರಿ ಹೆಚ್ಚು ನೀರು ಹರಿದಿದ್ದು, ಈ ಬಾರಿ ಯಾವುದೇ ಜಲ ಸಂಕಷ್ಟ ಇಲ್ಲದಂತಾಗಿದೆ.

ಜಿಲ್ಲೆಯ ರೈತರು ಮುಂಗಾರು ಮತ್ತು ಬೇಸಿಗೆ ಬೆಳೆಯನ್ನು ಬೆಳೆಯಬಹುದು ಹಾಗೂ ಕಾವೇರಿ ನದಿಪಾತ್ರದ ನಗರ, ಪಟ್ಟಣಗಳು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗೂ ಯಾವುದೇ ಆತಂಕ ಇಲ್ಲ. ಹೀಗಾಗಿ ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ ಅಕ್ಷರ ಜಾತ್ರೆಗೆ ಎಲ್ಲಿಲ್ಲದ ಸಂಭ್ರಮ. ಜಿಲ್ಲೆಯವರಲ್ಲದೆ ನಾಡಿನ ಜನರು ಅಕ್ಷರ ಜಾತ್ರೆಯಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದಾರೆ. ಸಮೇಳನಕ್ಕೆ ಬಂದವರಲ್ಲಿ ಬಹಳಷ್ಟು ಮಂದಿ ಕೆಆರ್‌ಎಸ್‌‍ ವೀಕ್ಷಣೆಗೆ ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 124.80 ಅಡಿ ಸಾಮರ್ಥ್ಯದ ಕೆಆರ್‌ಎಸ್‌‍ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ. ಪ್ರಸ್ತುತ ಶೇ.100ರಷ್ಟು ನೀರು ಸಂಗ್ರಹವಾಗಿದ್ದು, 49.45 ಟಿಎಂಸಿ ನೀರು ಇದೆ. ರಾಜ್ಯದ 14 ಪ್ರಮುಖ ಜಲಾಶಯಗಳ ಗರಿಷ್ಠ ನೀರಿನ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 762.30 ಟಿಎಂಸಿ ಅಡಿ ನೀರಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 401.10 ಟಿಎಂಸಿಯಷ್ಟು ನೀರು ಮಾತ್ರ ಇತ್ತು. ಒಟ್ಟಾರೆ ಶೇ.85ರಷ್ಟು ಜಲಾಶಯಗಳಲ್ಲಿ ನೀರಿದೆ.

ವಾಣಿ ವಿಲಾಸ ಸಾಗರವೂ ಈ ಬಾರಿ ಶೇ.92ರಷ್ಟು ಭರ್ತಿಯಾಗಿದೆ. ಪದೇ ಪದೇ ನೀರಿನ ಸಮಸ್ಯೆಗೆ ತುತ್ತಾಗುತ್ತಿದ್ದ ಸಕ್ಕರೆ ನಾಡು ಈ ಬಾರಿ ಆ ಸಮಸ್ಯೆಯಿಂದ ಮುಕ್ತವಾಗಿದ್ದು, ಸಡಗರ ಸಂಭ್ರಮದಿಂದ ಅಕ್ಷರ ಜಾತ್ರೆ ಆಚರಿಸುವಂತೆ ಆಗಿದ್ದು, ಪ್ರಕೃತಿಯೂ ಶುಭ ಕೋರಿದಂತಾಗಿದೆ.

RELATED ARTICLES

Latest News