Thursday, September 18, 2025
Homeಇದೀಗ ಬಂದ ಸುದ್ದಿಕೇತಗಾನಹಳ್ಳಿಯಲ್ಲಿ ಎಚ್‌ಡಿಕೆ ಕುಟುಂಬಕ್ಕೆ ಸೇರಿದ 9 ಎಕರ ಒತ್ತುವರಿ ಜಮೀನು ತೆರವು

ಕೇತಗಾನಹಳ್ಳಿಯಲ್ಲಿ ಎಚ್‌ಡಿಕೆ ಕುಟುಂಬಕ್ಕೆ ಸೇರಿದ 9 ಎಕರ ಒತ್ತುವರಿ ಜಮೀನು ತೆರವು

9 acres of land allegedly encroached by HDK family in Kethaganahalli vacated

ಬೆಂಗಳೂರು,ಮಾ.18- ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಭೂ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ 9 ಎಕರೆ ಜಮೀನನ್ನು ಸರ್ಕಾರ ತೆರವುಗೊಳಿಸಿದೆ. ರಾಮನಗರಜಿಲ್ಲೆ ಬಿಡದಿಯ ಕೇತಗಾನಹಳ್ಳಿಯಲ್ಲಿ ರುವ ಸರ್ವೆ ನಂ.7, 8, 9, 10, 16, 17 ಮತ್ತು 79ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಕುಟುಂಬವು ಹಾಗೂ ಇತರರು 14 ಎಕರೆ ಸರ್ಕಾರಿ ಜಮೀನನ್ನು ಭೂ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್‌‍ ಬಿಗಿ ಭದ್ರತೆ ನಡುವೆ ತೆರವುಗೊಳಿಸಲಾಗಿದೆ.

ರಾಮನಗರ ಜಿಲ್ಲಾ ಎಸ್ಪಿ ಶ್ರೀನಿವಾಸ್‌‍ ಗೌಡ, ಜಿಲ್ಲಾಧಿಕಾರಿ ಯಶವಂತ.ವಿ.ಗುರುಕರ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿರಾಜೇಂದ್ರ ಕಟಾರಿಯಾ ಹಾಗೂ ಸ್ಥಳೀಯ ಪೊಲೀಸರ ನೆರವಿನಿಂದ ಜಮೀನನ್ನು ತೆರವುಗೊಳಿಸಿ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲಾಗಿದೆ.
ಒಂದು ವೇಳೆ ನಾನು ಕಾನೂನು ಬಾಹಿರವಾಗಿ ಭೂ ಒತ್ತುವರಿ ಮಾಡಿಕೊಂಡಿದ್ದರೆ ತೆರವುಗೊಳಿಸಬಹುದೆಂದು ಸ್ವತಃ ಕುಮಾರಸ್ವಾಮಿ ಯವರೇ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಮೇಲ್ನೋಟಕ್ಕೆ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಭಾರೀ ಬಿಗಿಭದ್ರತೆ ನಡುವೆ ತೆರವುಗೊಳಿಸಲಾಗಿದೆ .

ನಾವು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಿದ್ದೇವೆ. ಅದಕ್ಕೂ ಮುನ್ನ ಹೈಕೋರ್ಟ್‌ಗೆ ಮುಚ್ಚಿದ ಲಕೋಟಿಯಲ್ಲಿ ವರದಿ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಕುಮಾರಸ್ವಾಮಿ ಹಾಗೂ ಇತರರು ಸರ್ಕಾರಕ್ಕೆ ಸೇರಿದ ಜಮೀನನ್ನು ಭೂ ಒತ್ತುವರಿ ಮಾಡಿಕೊಂಡಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಸರ್ಕಾರ ವಿಶೇಷ ತನಿಖಾ ದಳ(ಎಸ್‌‍ಐಟಿ) ರಚನೆ ಮಾಡಿತ್ತು.

ಎಸ್‌‍ಐಟಿಯು ಕೇತಗಾನಹಳ್ಳಿ ಸುತ್ತಮುತ್ತ ತನಿಖೆ ನಡೆಸಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೇಲ್ನೋಟಕ್ಕೆ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ಡಿ.ಸಿ.ತಮಣ್ಣ ಮತ್ತಿತರರು ಸರ್ಕಾರಕ್ಕೆ ಸೇರಿದ ಜಮೀನನ್ನು ಭೂ ಒತ್ತುವರಿ ಮಾಡಿಕೊಂಡಿದ್ದಾರೆಂದು ಹೈಕೋರ್ಟ್‌ಗೆ ವರದಿ ಸಲ್ಲಿಸಿತ್ತು.

ಕುಮಾರಸ್ವಾಮಿ ಹಾಗೂ ಇತರರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್‌ ಕಂದಾಯ ಇಲಾಖೆ ಅಧಿಕಾರಿಗಳಿಗೆ ಹೈಕೋರ್ಟ್‌ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಆದರೆ ಅಧಿಕಾರಿಗಳು ವಿಳಂಬ ಮಾಡಿದ್ದರಿಂದ ಹೈಕೋರ್ಟ್‌ ಕೆಂಡಾಮಂಡಲವಾಗಿತ್ತು.ಅಲ್ಲದೆ ಪ್ರಕರಣದಲ್ಲಿನ ಎಲ್ಲಾ ಆರೋಪಿಗಳನ್ನೂ ಬ್ರೈನ್‌ ಮ್ಯಾಪಿಂಗ್‌ಗೆ ಒಳಪಡಿಸಲು ಆದೇಶಿಸಿದರೆ ಸತ್ಯ ಹೊರಬರಲಿದೆ ಎಂದು ಹೇಳಿತ್ತು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ.ತಮಣ್ಣ ಮತ್ತಿತರರ ವಿರುದ್ಧದ ಭೂ ಕಬಳಿಕೆ ಆರೋಪ ಸಂಬಂಧ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆಕ್ಷೇಪಿಸಿ ಸಮಾಜ ಪರಿವರ್ತನಾ ಸಮುದಾಯದ ಎಸ್‌‍.ಆರ್‌.ಹಿರೇಮಠ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾ. ಕೆ.ಸೋಮಶೇಖರ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ಸಂಬಂಧ ವಿವರಣೆ ನೀಡಲು ಮುಂದಿನ ವಿಚಾರಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಿತ್ತು.

ಎಸ್‌‍ಐಟಿ ರಚಿಸಬೇಕು ಎಂದು ನ್ಯಾಯಾಲಯ ಆದೇಶಿಸಿಲ್ಲ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ರಾಜೇಂದ್ರ ಕಠಾರಿಯಾ ಎಸ್‌‍ಐಟಿ ರಚಿಸಿದ್ದಾರೆ. ಕಂದಾಯ ಇಲಾಖೆಯು ಎಸ್‌‍ಐಟಿ ರಚಿಸಲು ಅಷ್ಟು ಶಕ್ತಿಶಾಲಿಯೇ? ರಾಜ್ಯ ಸರ್ಕಾರವು ಸಂವಿಧಾನಕ್ಕಿಂತ ಮಿಗಿಲಾಗಿದೆಯೇ? 14 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಉಳಿದ 71 ಎಕರೆ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಬೇಕಿದೆ. ಯಾವ ರೀತಿಯಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ? ಎಷ್ಟು ಎಕರೆ ತೆರವು ಮಾಡಲಾಗಿದೆ? ತಡೆಯಾಜ್ಞೆ ಪಡೆಯಲು ಸರ್ಕಾರ ಎಸ್‌‍ಐಟಿ ರಚನೆ ಮಾಡಿದೆ. ಕಠಾರಿಯಾ ವಿರುದ್ಧ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಲಾಗುವುದು ಎಂದು ಪೀಠ ಹೇಳಿತ್ತು.

ಪ್ರಬಲರಲ್ಲದವರು ಒತ್ತುವರಿ ಮಾಡಿದ್ದ 14 ಎಕರೆಯನ್ನು ತೆರವುಗೊಳಿಸಲಾಗಿದೆ. ಬಲಿಶಾಲಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವು ಮಾಡಿಸಲಾಗಿಲ್ಲ. ಬಲಶಾಲಿಗಳು ಎಸ್‌‍ಐಟಿ ರಚನೆಯನ್ನು ಪ್ರಶ್ನಿಸಿ, ತಡೆಯಾಜ್ಞೆ ಪಡೆಯಲು ಅನುಕೂಲ ಮಾಡಿಕೊಡಲು ವ್ಯವಸ್ಥೆ ಮಾಡಲಾಗಿದೆ. ಸರ್ಕಾರ ತನ್ನ ಜಮೀನನ್ನು ವಶಕ್ಕೆ ಪಡೆಯಲು ನಾವು ಹೋರಾಟ ಮಾಡುತ್ತಿದ್ದೇವೆ. ಆರೋಪಿಗಳ ಹೆಸರನ್ನು ಕೇಳಿದ ತಕ್ಷಣ ಸರ್ಕಾರ ಬೆಚ್ಚುತ್ತಿದೆ. ಆರೋಪಿಗಳ ಜೊತೆ ಸರ್ಕಾರ ಕೈಜೋಡಿಸಿದೆ. ಇಲ್ಲಿ ಅಪ್ರಾಮಾಣಿಕತೆ ಎದ್ದು ಕಾಣುತ್ತಿದೆ. ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಲಾಗುತ್ತಿದೆ. ಇದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಬೇಕು ವಿಚಾರಣೆ ವೇಳೆ ಸಮಾಜ ಪರಿವರ್ತನಾ ಸಮುದಾಯದ ಪರ ವಕೀಲರು ವಾದ ಮಂಡಿಸಿದ್ದರು.

ಸರ್ಕಾರದ ಪರ ವಕೀಲರು, ಒತ್ತುವರಿ ಮಾಡಿರುವ ಸರ್ಕಾರದ ಜಮೀನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕೆರೆಗೆ ಸಂಬಂಧಿಸಿದ 6 ಎಕರೆ 20 ಗಂಟೆ ತೆರವು ಮಾಡಲಾಗಿದೆ. 11 ಎಕರೆ 20 ಗುಂಟೆಯನ್ನು ಪತ್ತೆ ಮಾಡಿದ್ದೇವೆ. ಐಜಿಪಿ ಮತ್ತು ರಾಮನಗರ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಯನ್ನು ಒಳಗೊಂಡ ಎಸ್‌‍ಐಟಿ ರಚಿಸಲಾಗಿದೆ. ಎಸ್‌‍ಐಟಿ ರಚಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಕಾನೂನು ಜಾರಿಗೊಳಿಸಲು ಎಸ್‌‍ಐಟಿ ರಚಿಸಲಾಗಿದೆ. 18 ಎಕರೆಯನ್ನು ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅಸಲಿ ದಾಖಲೆಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೀಠಕ್ಕೆ ಮಾಹಿತಿ ನೀಡಿದ್ದರು.

RELATED ARTICLES

Latest News