ಹುಬ್ಬಳ್ಳಿ,ಫೆ.16- ಪದವೀಧರರಿಗೆ ಯುವ ನಿಧಿ ಗ್ಯಾರಂಟಿ ಘೋಷಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಅಂಥ ಪದವೀಧರರನ್ನು ರೂಪಿಸುವ ವಿವಿಗಳನ್ನೇ ಮುಚ್ಚಲು ಹೊರಟಿದ್ದು ಅಕ್ಷಮ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯ ಸಚಿವ ಸಂಪುಟದ ಉಪ ಸಮಿತಿ ರಾಜ್ಯದಲ್ಲಿನ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ತೀರ್ಮಾನಕ್ಕೆ ಸಚಿವರು ತೀವ್ರ ಆಕೋಶ ವ್ಯಕ್ತಪಡಿಸಿದ್ದಾರೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದೆಲ್ಲೆಡೆ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲು 10 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ಅವನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿಯಿಡುತ್ತಿದೆ ಎಂದು ಹರಿ ಹಾಯ್ದಿದ್ದಾರೆ.
ಶಿಕ್ಷಣದ ಮೂಲಭೂತ ಹಕ್ಕಿಗೆ ಕೊಡಲಿ ಪೆಟ್ಟು :
ಶಿಕ್ಷಣ ಸರ್ವರ ಮೂಲಭೂತ ಹಕ್ಕು. ಆದರೆ, ರಾಜ್ಯ ಸರ್ಕಾರ ಇದನ್ನು ಕಸಿದುಕೊಳ್ಳುತ್ತಿದೆ. ಒಂದೆಡೆ ಅರೆಬರೆ ಯುವ ನಿಧಿ ನೀಡುತ್ತ, ಇನ್ನೊಂದೆಡೆ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳಿಸಲು ನೋಡುತ್ತಿದೆ. ಶಿಕ್ಷಣದ ಮೂಲಭೂತ ಹಕ್ಕಿಗೆ ಕೊಡಲಿ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ವಿವಿಗಳಿಗಲ್ಲ; ಸರ್ಕಾರಕ್ಕೇ ಆರ್ಥಿಕ ಸಂಕಷ್ಟ:
ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಗಳನ್ನೂ ಆದಾಯದ ಮೂಲ ಮತ್ತು ಒಂದು ಸರಕನ್ನಾಗಿ ನೋಡುತ್ತಿರುವುದು ಖಂಡನೀಯ. ವಿವಿಗಳು ಆರ್ಥಿಕ ಮತ್ತು ಅಗತ್ಯ ಭೂಮಿಯ ಕೊರತೆ ಎದುರಿಸುತ್ತಿವೆ ಎಂಬ ಕುಂಟು ನೆಪವೊಡ್ಡುವ ಈ ಸರ್ಕಾರವೇ ಮೊದಲು ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಟೀಕಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಸಭೆ ನಡೆಸುವ ಮೊದಲು ತಮ ಸರ್ಕಾರ ಮತ್ತು ಇಲಾಖೆಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆಗೆ ಸಭೆ ನಡೆಸುವುದು ಒಳಿತು ಎಂದು ಸಚಿವ ಜೋಶಿ ಸಲಹೆ ಮಾಡಿದ್ದಾರೆ.
ಬಿಜೆಪಿ ಸರ್ಕಾರ ರಾಜ್ಯದ ಎಲ್ಲಾ ಭಾಗದವರಿಗೂ ಉನ್ನತ ಶಿಕ್ಷಣ ಕೈಗೆಟುಕಲು ಅನುವಾಗುವಂತೆ ಒಟ್ಟು 10 ವಿವಿಗಳನ್ನು ಸ್ಥಾಪಿಸಿತು. ಆದರೆ, ಕಾಂಗ್ರೆಸ್ ಸರ್ಕಾರ ಬೀದರ್ ವಿವಿ ಒಂದನ್ನು ಬಿಟ್ಟು ಹಾಸನ, ಮಂಡ್ಯ ಚಾಮರಾಜನಗರ, ಕೊಡಗು, ಹಾವೇರಿ, ಬಾಗಲಕೋಟೆ, ಕೊಪ್ಪಳ, ಮಹಾರಾಣಿ ಕ್ಲಸ್ಟರ್, ಮತ್ತು ನೃಪತುಂಗ ವಿವಿಗಳಿಗೆ ಬೀಗ ಹಾಕಲು ಯೋಚಿಸುತ್ತಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಶೋಷಣೆ ಮಾಡಿದಂತೆ ಎಂದಿದ್ದಾರೆ ಸಚಿವರು.
ಕರಾವಳಿ ಇಂಧನ ಕಡಿತ; ಆಡಳಿತ ವೈಫಲ್ಯಕ್ಕೆ ಕನ್ನಡಿ:
ಇನ್ನು, ಕಾಂಗ್ರೆಸ್ ಸರ್ಕಾರ ಕರ್ನಾಟಕ ಕರಾವಳಿ ಭದ್ರತೆಗೆ ಬೇಕಿರುವ ಅಗತ್ಯ ಇಂಧನವನ್ನು ಕಡಿತಗೊಳಿಸಲು ಆದೇಶಿಸಿದೆ. ಕರಾವಳಿ ಭದ್ರತೆಯ ವಿಚಾರದಲ್ಲಿ ಇಂಧನ ಕಡಿತಗೊಳಿಸಿರುವುದು ಇವರ ಆಡಳಿತ ವೈಫಲ್ಯದ ನಿದರ್ಶನ ಎಂದು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ವೇಳೆ ಜನರಿಗೆ ಅವೈಜ್ಞಾನಿಕ ರೀತಿ ಭರವಸೆಗಳನ್ನು ನೀಡಿ ಇತ್ತ ಅವನ್ನೂ ನೀಡಲಾಗದೆ, ಜನರಿಗೆ ಬೆಲೆ ಏರಿಕೆ ಬರೆ ಎಳೆದು ಹಿಂಸೆ ಮಾಡುತ್ತಿದೆ. ಆಡಳಿತದಲ್ಲಿ ಭ್ರಷ್ಟಾಚಾರದ ಪರಾಕಾಷ್ಟೆ ಮೀರಿದೆ ಎಂದು ಆರೋಪಿಸಿದ್ದಾರೆ.ವ್ಯಾಪಕ ಭ್ರಷ್ಟಾಚಾರ, ನಾನಾ ಹಗರಣಗಳು, ಅವೈಜ್ಞಾನಿಕ ರೀತಿಯ ಘೋಷಣೆಗಳಿಂದಾಗಿ ರಾಜ್ಯವನ್ನು ಆರ್ಥಿವಾಗಿ ಮಾತ್ರವಲ್ಲದೆ, ಬೌದ್ಧಿಕವಾಗಿಯೂ ದಿವಾಳಿತನದತ್ತ ಕೊಂಡೊಯ್ಯುತ್ತಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್‌್ಸ ಖಾತೆಯಲ್ಲಿ ತೀವ್ರ ಆಕೋಶ ವ್ಯಕ್ತಪಡಿಸಿದ್ದಾರೆ.