ಬೆಂಗಳೂರು,ಅ. 26- ರಾಜ್ಯದ ಮಿನಿ ಸಮರವೆಂದೇ ಪರಿಗಣಿಸಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆಯವರೆಗೆ 83 ಅಭ್ಯರ್ಥಿಗಳಿಂದ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾಗಿವೆ. ಅ.28ರಂದು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ.
ಉಪ ಚುನಾವಣೆಗೆ ಸಂಬಂಧಿಸಿದಂತೆ ಅ.18ರಿಂದ ನಿನ್ನೆಯವರೆಗೆ ಮೂರು ಕ್ಷೇತ್ರಗಳಲ್ಲಿ 83 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶಿಗ್ಗಾಂವಿಯಲ್ಲಿ 26, ಸಂಡೂರು(ಎಸ್‌ಟಿ)ನಲ್ಲಿ 7 ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಅತಿ ಹೆಚ್ಚು 50 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಇದರಲ್ಲಿ 60 ನಾಮಪತ್ರಗಳು ಪುರಷ ಹಾಗೂ 6 ನಾಮಪತ್ರಗಳು ಮಹಿಳಾ ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿವೆ.ಬಿಜೆಪಿಯ ಅಭ್ಯರ್ಥಿಗಳಿಂದ 9, ಕಾಂಗ್ರೆಸ್ ಅಭ್ಯರ್ಥಿಗಳಿಂದ 11 ಜೆಡಿಎಸ್ ಅಭ್ಯರ್ಥಿಯಿಂದ 4 ಹಾಗೂ ಪಕ್ಷೇತರರಿಂದ 72 ನಾಮಪತ್ರಗಳು ಸಲ್ಲಿಕೆಯಾಗಿವೆ.
ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ವಾಪಸ್ಸು ಪಡೆಯಲು ಅ.30ರವರೆಗೂ ಅವಕಾಶವಿದೆ. ಅಂದು ಸಂಜೆ ವೇಳೆಗೆ ಚುನಾವಣಾ ಕಣದಲ್ಲಿ ಉಳಿಯುವ ಅಧಿಕೃತ ಅಭ್ಯರ್ಥಿಗಳ ಮಾಹಿತಿಯನ್ನು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗುತ್ತದೆ.
ಅ.30 ಕ್ಕೂ ಮುನ್ನ ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳನ್ನು ಮನವೊಲಿಸಿ ನಾಮಪತ್ರ ಹಿಂಪಡೆಯುವಂತೆ ಮಾಡಬೇಕು. ಇಲ್ಲದಿದ್ದರೆ ಅಧಿಕೃತ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ. ನ.13 ಮೂರು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನ. 23ರಂದು ಮತ ಎಣಿಕೆ ನಡೆದು, ಅಂದು ಸಂಜೆ ವೇಳೆಗೆ -ಫಲಿತಾಂಶ ಪ್ರಕಟವಾಗಲಿದೆ.