ಲಕ್ಷದ್ವೀಪ, ಜ.4- ಸಾಹಸಿಯನ್ನು ಸ್ವೀಕರಿಸಲು ಬಯಸುವವರಿಗೆ ಲಕ್ಷದ್ವೀಪವು ನಿಮ್ಮ ಪಟ್ಟಿಯಲ್ಲಿರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ. ಲಕ್ಷದ್ವೀಪಕ್ಕೆ ಭೇಟಿ ನೀಡಿ ಆದ ಅನುಭವಗಳನ್ನು ಹಂಚಿಕೊಂಡಿರುವ ಅವರು, ನನ್ನ ವಾಸ್ತವ್ಯದ ಸಮಯದಲ್ಲಿ ನಾನು ಸ್ಪೀಡ್‍ಬೋಟ್‍ನಲ್ಲಿ ಪ್ರಯಾಣಿಸಿದ್ದು ಮತ್ತು ಸಮುದ್ರದಾಳದಲ್ಲಿ ಪ್ರಯಾಣಿಸಿದ್ದು ರೋಮಾಂಚನಕಾರಿಯಾಗಿತ್ತು. ಸಾಹಸಪ್ರಿಯರಿಗೆ ಇದು ಹೇಳಿ ಮಾಡಿಸಿದ ಪ್ರವಾಸಿ ತಾಣ ಎಂದು ಮೋದಿ ಮನದಾಳದ ಮಾತುಗಳನ್ನಾಡಿದ್ದಾರೆ.
ದೇಶದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಪ್ರಧಾನಿ ಭೇಟಿ ನೀಡಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ಹಲವು ಸಾಹಸಮಯ ಕ್ರೀಡೆಗಳಲ್ಲೂ ಭಾಗಿಯಾಗಿ ತಮ್ಮ ಕ್ಯಾಮೆರಾದಲ್ಲಿ ಸಮುದ್ರದಾಳದಲ್ಲಿರುವ ಹವಳಗಳು, ಬಣ್ಣ ಬಣ್ಣದ ಮೀನುಗಳನ್ನು ಸೆರೆಹಿಡಿದು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಸಾಹಸ ಪ್ರಿಯರಾದರೆ ನೀವು ಖಂಡಿತ ಲಕ್ಷದ್ವೀಪಕ್ಕೆ ಬರಬೇಕು, ವಾಸ್ತವ್ಯ ಹೂಡಬೇಕು. ಸ್ನಾರ್ಕೆಲಿಂಗ್ ಸೇರಿದಂತೆ ಇಲ್ಲಿನ ಅಪರೂಪದ ಕ್ರೀಡೆ ಹಾಗೂ ಪ್ರವಾಸಿ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
ರಮಣೀಯ ಸೌಂದರ್ಯದ ಜತೆಗೆ ಲಕ್ಷದ್ವೀಪದ ಪ್ರಶಾಂತತೆಯೂ ಮೋಡಿ ಮಾಡುತ್ತದೆ. ನಾನು ಇದೇ ಸಂದರ್ಭದಲ್ಲಿ ದೇಶದ 140 ಕೋಟಿ ಭಾರತೀಯರ ಕಲ್ಯಾಣಕ್ಕೆ ಇನ್ನಷ್ಟು ಶ್ರಮಿಸಬೇಕೆಂಬ ದೃಢ ನಿರ್ಧಾರ ಮೂಡಿತು ಮತ್ತು ಅದರ ಪ್ರತಿಬಿಂಬವೂ ನನ್ನ ಮುಂದೆ ಹಾದು ಹೋಯಿತು ಎಂದು ಹೇಳಿದ್ದಾರೆ.
ಸಮುದ್ರ ತಟದಲ್ಲಿ ಬೆಳಗಿನ ನಡಿಗೆಯೂ ಕೂಡ ಅದ್ವಿತೀಯ ಅನುಭವ ನೀಡಿದೆ. ನನ್ನ ಈ ಪ್ರವಾಸ ಎಂದೆಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.