Monday, April 20, 2026
Homeರಾಜ್ಯನಾಳೆಯಿಂದ ಸಾರಿಗೆ ನೌಕರರ ಮುಷ್ಕರ, ಬಸ್‌‍ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ನಾಳೆಯಿಂದ ಸಾರಿಗೆ ನೌಕರರ ಮುಷ್ಕರ, ಬಸ್‌‍ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು,ಏ.20- ತಮ್ಮ ಬಹುದಿನಗಳ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ ಹಾದಿ ಹಿಡಿದಿದ್ದು, ನಾಳೆಯಿಂದ ಮುಷ್ಕರಕ್ಕೆ ಧುಮುಕಲಿದ್ದಾರೆ.

ನಾಳೆ ಬೆಳಗ್ಗೆ ನಗರದ ಫ್ರೀಡಂಪಾರ್ಕ್‌ನಲ್ಲಿ ಕೆಎಸ್‌‍ಆರ್‌ಟಿಸಿ ಈಶಾನ್ಯ, ವಾಯುವ್ಯ ಮತ್ತು ಬಿಎಂಟಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿರುವುದರಿಂದ ಬಸ್‌‍ ಸಂಚಾರ ವ್ಯತ್ಯಯ ಉಂಟಾಗಲಿದೆ.

ಪ್ರತಿಭಟನೆಯಲ್ಲಿ ಭಾಗಿಯಾದರೆ ಅಂಥ ನೌಕರರ ವಿರುದ್ಧ ಶಿಸ್ತುಕ್ರಮ ಇಲ್ಲವೇ ಸೇವೆಯಿಂದ ಅಮಾನತುಪಡಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಆದರೆ ಇದಾವುದಕ್ಕೂ ಜಗ್ಗದ ನೌಕರರು ತಾವು ಪ್ರತಿಭಟನೆ ನಡೆಸಿಯೇ ತೀರುತ್ತೇವೆ ಎಂದು ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ.

ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲಾ ಡಿಪೋಗಳಲ್ಲಿ ಹೆಚ್ಚುವರಿ ಬಸ್‌‍ಗಳನ್ನು ನಿಯೋಜನೆ ಮಾಡಿದೆ. ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಬಾರದು ಎಂದು ಸಾರಿಗೆ ಇಲಾಖೆಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದಕ್ಕೂ ಮುನ್ನ ಸಾರಿಗೆ ಇಲಾಖೆ ನೌಕರರ ಜಂಟಿ ಕ್ರಿಯಾಸಮಿತಿ ಹಾಗೂ ಆಯುಕ್ತರ ನಡುವೆ ಹಲವು ಸುತ್ತಿನ ಸಭೆ ನಡೆದರೂ ಪ್ರಯೋಜನವಾಗಲಿಲ್ಲ. ಸಾರಿಗೆ ನೌಕರರ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಲಿದೆ ಎಂದು ಭರವಸೆ ಕೊಟ್ಟರೂ ಸಾರಿಗೆ ನೌಕರರ ಒಕ್ಕೂಟಗಳು ಒಪ್ಪಲಿಲ್ಲ.

ಬೇಕಾಬಿಟ್ಟಿ ರಜೆ ಹಾಕಿ ಪ್ರತಿಭಟನೆ
ವಾರದ ರಜೆ, ದೀರ್ಘಾವಧಿ ರಜೆ ಹೊರತುಪಡಿಸಿ ಎಲ್ಲ ನೌಕರರು ಹಾಜರಾಗಬೇಕು. ಬೇಕಾಬಿಟ್ಟಿ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾದರೆ ಮಾನತು ಮಾಡುವ ಎಚ್ಚರಿಕೆ ನೀಡಲಾಗಿದೆ.
ನಾಳೆ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿರುವ ಸರ್ಕಾರ, ಶೇ.7ರಷ್ಟು ವೇತನ ಹೆಚ್ಚಳಕ್ಕೆ ಮುಂದಾಗಿದೆ. ಆದರೆ ಶೇ.25 ರಷ್ಟು ವೇತನ ಹೆಚ್ಚಳಕ್ಕೆ ನೌಕರರು ಪಟ್ಟು ಹಿಡಿದಿದ್ದಾರೆ.

ನೌಕರರ ಬೇಡಿಕೆಗಳು ಏನು?
*2020-2023 ಮೂರು ವರ್ಷ 2 ತಿಂಗಳು ವೇತನ ಬಿಡುಗಡೆ

  • 38 ತಿಂಗಳ ಹಿಂಬಾಕಿ ಹಣ ಪಾವತಿ
  • 2024ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ
    ಸರ್ಕಾರದ ವಾದವೇನು?
    *2024ರ ಬದಲು 2026ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ
  • 38 ತಿಂಗಳ ಬದಲು 18/20 ತಿಂಗಳ ಹಿಂಬಾಕಿ ಬಿಡುಗಡೆ
RELATED ARTICLES

Latest News