ಬೆಂಗಳೂರು, ಮೇ 18- ತುಮಕೂರಿನಲ್ಲಿ ನಾಳೆ ನಡೆಯುತ್ತಿರುವ ಸಾಧನಾ ಸಮಾವೇಶ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಬಿಂಬಿಸುವ ವೇದಿಕೆಯೇ ಹೊರತು, ಯಾವುದೇ ನಾಯಕರ ಶಕ್ತಿ ಪ್ರದರ್ಶನವಲ್ಲ ಎಂದು ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಎರಡು ರೀತಿ ವಿಂಗಡಿಸಲಾಗಿತ್ತು. ಅಲ್ಪಾವಧಿ ಭರವಸೆಗಳನ್ನು ಬಹುತೇಕ ಈಡೇರಿಸಿದ್ದೇವೆ. ನೀರಾವರಿ ಮೂಲ ಸೌಕರ್ಯ ಅಭಿವೃದ್ಧಿಯಂತಹ ದೀರ್ಘಾವಧಿಯಂತಹ ಯೋಜನೆಗಳು ಅನುಷ್ಠಾನವಾಗಬೇಕಿದೆ. ಅವುಗಳನ್ನು ಹಂತಹಂತವಾಗಿ ಸರ್ಕಾರ ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಸಾಕಷ್ಟು ಕಂದಾಯ ಗ್ರಾಮಗಳ ಘೋಷಣೆಯಾಗಿದೆ. ಪೌತಿ ಖಾತೆ ಸೇರಿದಂತೆ ಸುಮಾರು 1.52 ಲಕ್ಷ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುತ್ತಿದ್ದೇವೆ ಹಾಗೂ ನುಡಿದಂತೆ ನಡೆದಿದ್ದೇವೆ ಎಂದು ಜನರಿಗೆ ತಿಳಿಸುವುದು ನಮ ಕರ್ತವ್ಯ. ಆ ನಿಟ್ಟಿನಲ್ಲಿ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
ಇಲ್ಲಿ ವ್ಯಕ್ತಿಗತವಾಗಿ ನನ್ನದಾಗಲಿ ಅಥವಾ ಬೇರೆ ಯಾವುದೇ ನಾಯಕರ ಶಕ್ತಿ ಪ್ರದರ್ಶನವಾಗುವುದಿಲ್ಲ ಎಂದು ಪುನರುಚ್ಚರಿಸಿದರು.ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗಿವೆ. ಯಾವೆಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ, ಏನೆಲ್ಲಾ ಮಾಡಿದ್ದೇವೆ ಎಂದು ತಿಳಿಸಬೇಕಿದೆ. ಜನರಿಗೂ ಅದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಪರಮೇಶ್ವರ್ ಹೇಳಿದರು.
ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನರ್‌ರಚನೆ ಸೇರಿದಂತೆ ಇಲ್ಲಿ ಯಾವುದೇ ವಿಚಾರಗಳು ಪ್ರಸ್ತಾಪವಾಗುವುದಿಲ್ಲ. ಇದು ಪಕ್ಷದ ಕಾರ್ಯಕ್ರಮವಲ್ಲ, ಸರ್ಕಾರಿ ಕಾರ್ಯಕ್ರಮ. ಹೀಗಾಗಿ ಹೈಕಮಾಂಡ್ ನಾಯಕರಿಗೆ ಆಹ್ವಾನ ನೀಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಸಾರಿಗೆ ನೌಕರರ ಸಂಘಟನೆಗಳ ಜೊತೆ ಚರ್ಚೆ ನಡೆಸಿದ್ದೇನೆ. ಬೇಡಿಕೆಗಳ ಬಗ್ಗೆ ಸಾಧನಾ ಸಮಾವೇಶ ಮುಗಿದ ಬಳಿಕ ಮೇ 20ರ ನಂತರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೊಡಿಸುವುದಾಗಿ ತಿಳಿಸಲಾಗಿದೆ. ಅವರು ಬಯಸಿದರೆ, ಮುಖ್ಯಮಂತ್ರಿ ಅವರ ಜೊತೆ ಚರ್ಚೆಗೆ ಸಮಯ ನಿಗದಿ ಮಾಡಲಾಗುವುದು ಎಂದರು.
ಸಾಧನಾ ಸಮಾವೇಶಕ್ಕೆ ಕಪ್ಪು ಬಾವುಟ ಪ್ರದರ್ಶಿಸಲು ಹೋರಾಟಗಾರರು ಮುಂದಾಗಿದ್ದರು. ಈ ಕುರಿತು ಮನವಿ ಮಾಡಿದಾಗ ಕಪ್ಪು ಬಾವುಟ ಪ್ರದರ್ಶನಗಳನ್ನು ಕೈ ಬಿಟ್ಟಿದ್ದಾರೆ ಎಂದು ಹೇಳಿದರು.
