Saturday, November 23, 2024
Homeರಾಜ್ಯನನ್ನ ಸೋಲಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ ; ಸೋಮಣ್ಣ

ನನ್ನ ಸೋಲಿಗೆ ಕಾರಣರಾದವರ ಮೇಲೆ ಕ್ರಮ ಜರುಗಿಸಿ ; ಸೋಮಣ್ಣ

ಬೆಂಗಳೂರು,ಜ.6- ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಮೇಲೆ ಕೂಡಲೇ ಶಿಸ್ತು ಕ್ರಮ ಜರುಗಿಸದಿದ್ದರೆ ಇದೇ ತಿಂಗಳ 16ರಂದು ಎಲ್ಲವನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಅವರು ಸ್ವಪಕ್ಷದ ವಿರುದ್ಧವೇ ಗುಡುಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ನನ್ನ ವಿರುದ್ಧ ಯಾರು? ಹೇಗೆ ಕೆಲಸ ಮಾಡಿದ್ದಾರೆ, ಏನೇನು ಮಾಡಿದ್ದಾರೆ ಎಂಬುದು ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಗೊತ್ತಿದೆ. ಕೂಡಲೇ ಅವರು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಾನೇ ಬಹಿರಂಗಪಡಿಸುತ್ತೇನೆ ಎನ್ನುವ ಮೂಲಕ ವಿಜಯೇಂದ್ರ ಆಪ್ತ ರುದ್ರೇಶ್‍ಗೆ ಎಚ್ಚರಿಕೆ ಕೊಟ್ಟರು.

ನಮ್ಮಂತಹವರ ಮೇಲೆ ಗದಾಪ್ರಹಾರ ಮಾಡಿದರೆ ಪರಿಣಾಮ ಏನಾಗುತ್ತದೆ ಎಂಬುದನ್ನು ಚಿಂತನೆ ಮಾಡಬೇಕು. ವಿಜಯೇಂದ್ರ ಅವರಿಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು ಎಂದರು.

ಚಾಮರಾಜನಗರ ಜಿಲ್ಲೆಗೆ ಬಿ.ವೈ.ವಿಜಯೇಂದ್ರ ಭೇಟಿ ನೀಡುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ವಿಜಯೇಂದ್ರ ರಾಜ್ಯಾಧ್ಯಕ್ಷರು, ಎಲ್ಲಿಗೆ ಬೇಕಾದರೂ ಹೋಗಲಿ ಎಂದು ಸಿಡಿಮಿಡಿಗೊಂಡರು. ನಾನು ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಆದರೆ ನಮ್ಮವರೇ ನನಗೆ ಏನು ಮಾಡಿದ್ದಾರೆ ಎಂಬುದು ವಿಜಯೇಂದ್ರ ಅವರಿಗೆ ಗೊತ್ತಿಲ್ಲವೇನೆಂದಲ್ಲ. ಬೇರೆ ಪಕ್ಷದವರ ಜೊತೆ ಕೈ ಜೋಡಿಸಿದವರು ಯಾರು ಎಂಬುದು ನಮ್ಮ ಅಧ್ಯಕ್ಷರಿಗೆ ಗೊತ್ತಿದೆ. ತಕ್ಷಣವೇ ಅಂಥವರ ಮೇಲೆ ಕ್ರಮ ಆಗಲೇಬೇಕು. ಪಕ್ಷಕ್ಕೆ ಮುಜುಗರವಾಗಬಾರದೆಂದು ನಾನು ಕೆಲವು ಕಹಿ ಸತ್ಯಗಳನ್ನು ನುಂಗಿಕೊಂಡಿದ್ದೇನೆ. ಎಲ್ಲಿಯವರೆಗೂ ನಾನು ಸಹಿಸಿಕೊಳ್ಳಲಿ ಎಂದು ಪ್ರಶ್ನೆ ಮಾಡಿದರು.

ಸೋಮಣ್ಣ ಎಂದಿಗೂ ನಂಬಿದವರಿಗೆ ಮೋಸ ಮಾಡಿದ ವ್ಯಕ್ತಿಯಲ್ಲ. ನಾನು ಕಳೆದ ನಾಲ್ಕು ದಶಕಗಳಿಂದ ರಾಜಕಾರಣದಲ್ಲಿ ಇದ್ದೇನೆ. ಪಕ್ಷ ಬದಲಾಯಿಸಿದರೂ ಅನಿವಾರ್ಯ ಕಾರಣಗಳಿಂದ ಪಕ್ಷ ಬದಲಾಯಿಸಿರಬಹುದು. ಆದರೆ ಸೋಮಣ್ಣ ಎಂದಿಗೂ ವಿಶ್ವಾಸ ದ್ರೋಹ ಮಾಡಿದ ವ್ಯಕ್ತಿಯಲ್ಲ. ನಮಗೆ ನಮ್ಮವರಿಂದಲೇ ಮೋಸವಾಗಿದೆ. ಅಂಥವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಬೇಕೆ?ಇದನ್ನು ವರಿಷ್ಠರು ತೀರ್ಮಾನಮಾಡಬೇಕೆಂದು ಒತ್ತಾಯಿಸಿದರು.

ದೇವೇಗೌಡರ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ : ಸಿಎಂ ಸಿದ್ದರಾಮಯ್ಯ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ನಾನು ಪಕ್ಷಕ್ಕೆ ಮುಜುಗರವಾಗಬಾರದೆಂದು ಯಾವುದೇ ಹೇಳಿಕೆಗಳನ್ನು ಕೊಟ್ಟಿಲ್ಲ. ನನಗಾಗಿರುವ ನೋವು ಯಾರಿಗೂ ಬರಬಾರದು. ಭವಿಷ್ಯದಲ್ಲಿ ಇದು ಮರುಕಳಿಸಬಾರದೆಂದರೆ ಕೆಲವರ ವಿರುದ್ಧ ಕ್ರಮ ಆಗಲೇಬೇಕು. ಪಕ್ಷದಲ್ಲಿದ್ದುಕೊಂಡೇ ನನಗೆ ಮೋಸ ಮಾಡುತ್ತಾರೆ ಎಂದರೆ ಯಾರನ್ನು ನಂಬಬೇಕೆಂದು ವಿಷಾದ ವ್ಯಕ್ತಪಡಿಸಿದರು.

ಮೋದಿಯವರನ್ನು ಮತ್ತೆ ಪ್ರಧಾನಿ ಮಾಡಬೇಕೆಂಬುದೇ ನಮ್ಮೆಲ್ಲರ ದೃಢಸಂಕಲ್ಪ, ಹಾಗಾಗಿ ನಾನು ಕೆಲವು ಕಹಿ ಸತ್ಯಗಳ ಅನುಭವವಾಗಿದ್ದರೂ ನುಂಗಿಕೊಂಡು ಹೋಗಿದ್ದೇನೆ. ಇದೇ ತಿಂಗಳ 16ರ ನಂತರ ಕೆಲವು ಬೆಳವಣಿಗೆಗಳ ಬಗ್ಗೆ ನಾನೇ ಮಾಹಿತಿ ಹಂಚಿಕೊಳ್ಳಲಿದ್ದೇನೆ ಎಂದು ಹೇಳಿದರು.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಪೂರಕವಾದ ವಾತಾವರಣವಿದೆ. ಎಷ್ಟು ಸಾಧ್ಯವೋ ಅಷ್ಟು ಸ್ಥಾನಗಳನ್ನು ಗೆಲ್ಲಲು ನಾವು ಶ್ರಮ ಹಾಕುತ್ತೇವೆ. ಪಕ್ಷವು ನನ್ನನ್ನು ಯಾವ ರೀತಿ ಬಳಸಿಕೊಳ್ಳುತ್ತದೆಯೋ ಗೊತ್ತಿಲ್ಲ. ಇದುವರೆಗೂ ಕೊಟ್ಟ ಜವಾಬ್ದಾರಿಯನ್ನು ಶ್ರದ್ದೆಯಿಂದ ಮಾಡಿದ್ದೇನೆ. ಮುಂದೆಯೂ ಸೋಮಣ್ಣನ ಅಗತ್ಯತೆ ಬೇಕೆಂದರೆ ಯಾವುದೇ ಕೆಲಸವನ್ನು ಶಿರಸಾ ವಹಿಸಿ ಮಾಡುತ್ತೇನೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿಯಾಗಬೇಕೆ ಬೇಡವೇ ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ನನಗೆ ಇಂಥದ್ದೇ ಕ್ಷೇತ್ರ ಬೇಕೆಂದು ಕೇಳುವ ವ್ಯಕ್ತಿಯಲ್ಲ. ವರಿಷ್ಠರು ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಬೇಡ ಎಂಬುದನ್ನು ಅಳೆದು ತೂಗಿ ತೀರ್ಮಾನಿಸುತ್ತಾರೆ. ವರಿಷ್ಠರು ಒಪ್ಪಿದರೆ ನಾನು ಅದಕ್ಕೂ ಸಿದ್ಧ ಕಾದು ನೋಡೋಣ ಏನಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಇದೇ ತಿಂಗಳ 8ರಂದು ನಾನು ದೆಹಲಿಗೆ ತೆರಳುತ್ತಿದ್ದೇನೆ. ಪಕ್ಷದ ವರಿಷ್ಠರು ಸೂಚನೆ ಕೊಟ್ಟಿದ್ದಾರೆ. ನಾನು ಯಾರ ವಿರುದ್ಧವೂ ದೂರು ನೀಡುವುದಿಲ್ಲ. ನನಗೆ ಯಾರಿಂದ ಅನ್ಯಾಯವಾಗಿದೆ ಎಂಬುದನ್ನು ಅವರ ಗಮನಕ್ಕೆ ತರುತ್ತೇನೆ. ನನ್ನ ನೋವನ್ನು ಪಕ್ಷದ ನಾಯಕರ ಜೊತೆ ಹಂಚಿಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಅವರು ಪ್ರಶ್ನಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿ ಕುರಿತಾಗಿ ಮಾತನಾಡಿದ ಸೋಮಣ್ಣ, ನನಗೆ ಅವರ ಭೇಟಿಯಿಂದ ಹೆಚ್ಚು ಶಕ್ತಿ ಬಂದಿದೆ. ರಾಜಕಾರಣದಲ್ಲಿ ಮುಂದುವರೆಯಬೇಕೆಂಬ ಇಚ್ಛೆ ಹೊಂದಿದ್ದೇನೆ. ಅವರಿಂದ ಮಾರ್ಗದರ್ಶನ ಪಡೆದಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.

ನನಗೆ ದೇವೇಗೌಡರು ರಾಜಕೀಯ ಗುರುಗಳು. 1983ರಿಂದಲೂ ನಾನು ಅವರನ್ನು ಬಲ್ಲೆ. ರಾಜಕಾರಣದಲ್ಲಿ ಏರೇಳಿತಗಳು ಉಂಟಾಗುವುದು ಸಹಜ. ಅದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬಾರದೆಂದು ಸಲಹೆ ಕೊಟ್ಟಿದ್ದಾರೆ. ನನಗೆ ಅವರ ಭೇಟಿ ಹೆಚ್ಚು ಬಲ ತಂದಿದೆ. ಅವರ ಮಾರ್ಗದರ್ಶನದಂತೆಯೇ ಮುಂದುವರೆಯುತ್ತೇನೆ ಎಂದು ಸೋಮಣ್ಣ ಹೇಳಿದರು.

ಪಡಿತರ ವಿತರಣೆ ಹಗರಣದಲ್ಲಿ ಟಿಎಂಸಿ ನಾಯಕ ಶಂಕರ್ ಅಧ್ಯಾ ಅರೆಸ್ಟ್

ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡಲ್ಲ. ನಮ್ಮಂಥವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ಅವರಿಗೇ ಅಂಟಿಕೊಂಡು ಹೋಗುತ್ತೇನೆ ಅಂದರೇ ಬೇರೆ ಮಾತಾಡಬೇಕಾಗುತ್ತೆ. ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಇನ್ನೂ ಯುವಕ. ನೀನು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಅಂತ ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು.

ನನ್ನ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಧ್ಯೆ ಯಾವ ಭಿನ್ನಾಭಿಪ್ರಾಯಗಳು ಇಲ್ಲ. ನಾನು ಮತ್ತು ಅಶೋಕ್ ಸ್ನೇಹಿತರು. ಅಶೋಕ್ ಮೊದಲು ಶಾಸಕನಾದಾಗ ನಾನು ಮಂತ್ರಿಯಾಗಿದ್ದೆ. ವಿಪಕ್ಷ ನಾಯಕ ಅಶೋಕ್ ನನಗಿಂತ 14 ವರ್ಷ ಚಿಕ್ಕವರು. ಅಶೋಕ್ ಮೇಲೆ ನನಗೆ ವಿಶ್ವಾಸ ಇದೆ. ನಮ್ಮವರಿಂದಲೇ ನೋವಾದಾಗ ನನ್ನ ಭಾವನೆ ಹೇಳಿಕೊಂಡಿದ್ದೇನೆ. ಸಂಕ್ರಾಂತಿ ಬಳಿಕ ಎಲ್ಲವೂ ಸುಖಾಂತ್ಯವಾಗಬೇಕು ಎಂದರು.

RELATED ARTICLES

Latest News