ಕೊಪ್ಪಳ,ಜ.7-ಲೋಕಸಭೆ ಚುನಾವಣೆ ಬಳಿಕ ಸಚಿವ ಸಂಪುಟ ಪುನರ್ ರಚನೆಯಾಗುವುದಾದರೆ ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ, ನಾನು ಅದೇ ವಿಶ್ವಾಸದಲ್ಲಿದ್ದೇನೆ ಎಂದು ಹಿರಿಯ ಶಾಸಕ ಬಸವರಾಜರಾಯರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನೀಡಿದ ತಮ್ಮ ಹೇಳಿಕೆಗೆ ಬದ್ಧ ಎಂದು ತಿಳಿಸಿದ್ದಾರೆ. ಸರ್ಕಾರ ರಚನೆಯಾಗುವ ವೇಳೆ ನನ್ನನ್ನು ಮಂತ್ರಿ ಮಾಡುವುದಾಗಿ ಸಿದ್ದರಾಮಯ್ಯ ಸಂದೇಶ ಕಳುಹಿಸಿದ್ದರು. ಅರಣ್ಯ, ಪರಿಸರ, ಜೀವಿಶಾಸ್ತ್ರ ಮತ್ತು ಯೋಜನಾ ಇಲಾಖೆಗಳ ಖಾತೆ ನೀಡುವುದಾಗಿಯೂ ಹೇಳಿದ್ದರು. ಆದರೆ ರಾಜಕೀಯ ಕಾರಣಕ್ಕಾಗಿ ಕೊನೆ ಕ್ಷಣದ ಬದಲಾವಣೆಗಾಗಿ ಅವಕಾಶ ತಪ್ಪಿ ಹೋಗಿದೆ ಎಂದರು.
ಸಚಿವ ಸ್ಥಾನ ಸೇರಿದಂತೆ ರಾಜಕೀಯ ಹುದ್ದೆಗಳು ಸರ್ಕಾರ ನೇಮಕಾತಿಗಳಂತಲ್ಲ. ಇಲ್ಲಿ ನಾನಾ ರೀತಿಯ ಹೊಂದಾಣಿಕೆಗಳಿರುತ್ತವೆ. ಸಚಿವರಾಗಲು ಅನುಭವ, ಹಿರಿತನ, ಕಿರಿತನ ಎಂಬ ಮಾನದಂಡಗಳು ಲೆಕ್ಕಕ್ಕಿರುವುದಿಲ್ಲ. 25 ವರ್ಷ ದಾಟಿದವರು, ಒಳ್ಳೆಯ ನಡತೆ ಹೊಂದಿದವರು ಪ್ರಧಾನಿ ಬೇಕಾದರೂ ಆಗಬಹುದು ಎಂದು ಹೇಳಿದರು.
ಪ್ರತಿ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ : ಸಿಎಂ ಸಿದ್ದರಾಮಯ್ಯ
ರಾಜಕೀಯದಲ್ಲಿ 5 ನಿಮಿಷಗಳಲ್ಲೇ ಏನು ಬೇಕಾದರೂ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಹಿಂದೆ ನನಗೆ ಸಚಿವ ಸ್ಥಾನ ತಪ್ಪಿ ಹೋಗಿತ್ತು. ಲೋಕಸಭೆ ಚುನಾವಣೆಯಾದ ಬಳಿಕ ಅವಕಾಶ ಸಿಗುವ ನಿರೀಕ್ಷೆಗಳಿವೆ. ಮುಖ್ಯಮಂತ್ರಿಯವರೇ ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅದನ್ನು ನಂಬಿಕೊಂಡಿದ್ದೇನೆ. ಆದರೆ ಅವಕಾಶ ಸಿಕ್ಕರೂ ಸಿಗಬಹುದು, ಸಿಗದೆಯೂ ಇರಬಹುದು. ಇದೇನು ಬಾಂಡ್ ಮೇಲೆ ಬರೆದುಕೊಡುವ ವಿಚಾರವಲ್ಲ ಎಂದರು.
ಲೋಕಸಭೆ ಚುನಾವಣೆಯ ಬಳಿಕ ಎಂದರೆ ಸಾಮಾನ್ಯವಾಗಿ ಜೂನ್-ಜುಲೈನಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂಬುದು ನಮ್ಮ ಲೆಕ್ಕಾಚಾರ. ಆ ಹಿನ್ನೆಲೆಯಲ್ಲಿ ತಾವು ನಿನ್ನೆ ಹೇಳಿಕೆ ನೀಡಿದ್ದಾಗಿ ಸಮರ್ಥಿಸಿಕೊಂಡರು.