ಗುರುಕುಲಗಳ ಮೂಲಕ ವಿದ್ಯೆ ದಾನ ಮಾಡುವ ಪದ್ಧತಿ ಭಾರತದಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಈಗಲೂ ಕೆಲವೆಡೆ ಮುಂದುವರೆಯುತ್ತಿದೆ. ಗುರುಕುಲಗಳಲ್ಲಿ ಸಂಸ್ಕಾರಯುಕ್ತ ಶಿಕ್ಷಣ ದೊರೆಯುತ್ತದೆ.
ಬ್ರಿಟಿಷರ ಆಳ್ವಿಕೆಯ ನಂತರ ಗುರುಕುಲಗಳ ಜೊತೆಗೆ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು. ಸ್ವಾತಂತ್ರ್ಯಾ ನಂತರ ಸರ್ಕಾರದ ಶಿಕ್ಷಣ ಸಂಸ್ಥೆಗಳ ಜೊತೆಗೆ ಅನುದಾನಿತ ಶಿಕ್ಷಣ ಸಂಸ್ಥೆಗಳು ತಲೆ ಎತ್ತತೊಡಗಿದವು. ಕಾಲಾನಂತರ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು.
ವಿದ್ಯೆ ಕಲಿಯುವವರ ಸಂಖ್ಯೆ ಹೆಚ್ಚಿದಂತೆಲ್ಲಾ ದಾನವಾಗಿದ್ದ ಶಿಕ್ಷಣ ಲಾಭದಾಯಕವಾಗ ತೊಡಗಿತು.
ಈಗ ಶಿಕ್ಷಣೋದ್ಯಮವಾಗಿ ಮಾರ್ಪಟ್ಟಿದೆ. ಗುರುಕುಲದಿಂದ ಉದ್ಯಮದೆಡೆಗೆ ಸಾಗಿರುವ ಶಿಕ್ಷಣ ವ್ಯವಸ್ಥೆ ಈಗ ದುಬಾರಿಯಾಗಿದೆ. ಶಿಕ್ಷಣದ ಮೂಲಕ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವುದು ಸರ್ವವಿದಿತ. ವೃತ್ತಿ ಶಿಕ್ಷಣವಾದ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್ಗಳಿಗೆ ದೇಶ-ವಿದೇಶಗಳಿಂದ ಬೇಡಿಕೆ ಹೆಚ್ಚಾದಾಗ ಸರ್ಕಾರಿ ಸ್ವಾಮ್ಯದಲ್ಲಿದ್ದ ಕಾಲೇಜುಗಳು ಖಾಸಗಿ ರಂಗದಲ್ಲೂ ಆರಂಭಗೊಂಡವು. ಸಂಘ-ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ಖಾಸಗಿಯಾಗಿ ವೃತ್ತಿಪರ ಕಾಲೇಜುಗಳು ದೇಶಾದ್ಯಂತ ತಲೆಎತ್ತಿ ನಿಂತಿವೆ. ಲಾಭದಾಯಕ ಎಂಬುದು ಖಚಿತವಾಗುತ್ತಿದ್ದಂತೆ ರಾಜಕಾರಣಿಗಳು ಶಿಕ್ಷಣ ರಂಗಕ್ಕೂ ಪ್ರವೇಶ ಮಾಡಿದರು. ಬಹಳಷ್ಟು ರಾಜಕಾರಣಿಗಳ ಆದಾಯದ ಮೂಲವು ಶಿಕ್ಷಣ ಸಂಸ್ಥೆಗಳೇ ಆಗಿವೆ ಎಂದರೆ ತಪ್ಪಾಗಲಾರದು.
ಖಾಸಗಿಯವರ ಕಪಿ ಮುಷ್ಟಿಯಲ್ಲಿ ವೃತ್ತಿ ಶಿಕ್ಷಣ ಪ್ರತಿಭಾವಂತರಿಗೆ ಸರ್ಕಾರಿ ಕಾಲೇಜುಗಳು ಹಾಗೂ ಸರ್ಕಾರಿ ಕೋಟಾದ ಸೀಟುಗಳಲ್ಲಿ ಪ್ರವೇಶ ದೊರೆಯತ್ತದೆ. ಆದರೆ, ಎಲ್ಲರಿಗೂ ಅದು ಸುಲಭ ಸಾಧ್ಯವಲ್ಲ. ವೃತ್ತಿ ಶಿಕ್ಷಣವು ಖಾಸಗಿಯವರ ಕಪಿಮುಷ್ಟಿಗೆ ಸಿಲುಕಿದ ನಂತರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತ ಕಾಪಾಡಲು ಹಲವು ಕಾನೂನು ಮತ್ತು ಕಟ್ಟಲೆಗಳನ್ನು ಜಾರಿಗೆ ತಂದಿವೆ. ಆದರೂ ಶಿಕ್ಷಣ ವ್ಯವಸ್ಥೆಯಲ್ಲಿನ ವ್ಯಾಪಾರ ಮಾತ್ರ ದೂರವಾಗಿಲ್ಲ. ಲಾಭದ ಉದ್ದೇಶದಿಂದ ಸಾಕಷ್ಟು ಟ್ಯುಟೋರಿಯಲ್ಗಳು ಹುಟ್ಟಿಕೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗೆ ಕೆಲವು ಅನುಕೂಲಗಳು ಆಗಿವೆ. ಲಾಭದ ಬೆನ್ನುಬಿದ್ದಿರುವುದರಿಂದ ಶಿಕ್ಷಣ ವ್ಯವಸ್ಥೆಯ ದುರ್ಬಲತೆಯ ಲಾಭ ಪಡೆದು ಕೆಲವರು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮವೆಸಗುವುದು ಆಗಾಗ್ಗೆ ಕಂಡುಬಂದಿದೆ.
ನೀಟ್ಗೆ ವಿರೋಧ
ರಾಷ್ಟ್ರಮಟ್ಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯನ್ನು 2016ರಿಂದೀಚೆಗೆ ಜಾರಿಗೆ ತರಲಾಗಿದೆ. ಅಲ್ಲಿಯವರೆಗೆ ಆಯಾ ರಾಜ್ಯದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ನೀಟ್ಗೆ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಲೂ ಇವೆ.
ರಾಜಕಾರಣಿಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ನಡುವಿನ ಸಂಬಂಧ ಕೆಲವು ಕಾಲೇಜುಗಳಿಗಷ್ಟೇ ಸೀಮಿತವಾಗಿಲ್ಲ. ರಾಷ್ಟ್ರದ ಒಟ್ಟಾರೆ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯ ಸ್ವರೂಪವೇ ರಾಜಕಾರಣಿಗಳ ಹಿಡಿತದಲ್ಲಿದೆ ಎಂದರೆ ಅತಿಶಯೋಕ್ತಿ ಆಗಲಾರದು. ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ ಶಿಕ್ಷಣ ವ್ಯವಸ್ಥೆಯ ಮೇಲಿನ ಹಿಡಿತ ಸಡಿಲಗೊಳ್ಳುವುದಿಲ್ಲ ಎಂಬದು ಎಲ್ಲರಿಗೂ ಗೊತ್ತಿರುವ ಸಂಗತಿ.
ದೇಶದಲ್ಲಿ 1980-90ರ ದಶಕಗಳಲ್ಲಿ ಖಾಸಗೀಕರಣಕ್ಕೆ ಅವಕಾಶ ದೊರೆತರೂ, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರದ ಕಠಿಣ ನಿಯಮಗಳಿದ್ದವು. ದೊಡ್ಡ ಪ್ರಮಾಣದ ಭೂಮಿ, ಬಹು ಕೋಟಿ ಬಂಡವಾಳ ಮತ್ತು ರಾಷ್ಟ್ರ ಮಟ್ಟದಲ್ಲಿ ಪರವಾನಗಿ ಪಡೆಯವುದು ಎಲ್ಲರಿಗೂ ಸಾಧ್ಯವಿರಲಿಲ್ಲ. ಕೆಲವು ಪ್ರಭಾವಿ ರಾಜಕಾರಣಿಗಳಿಗೆ ಮಾತ್ರ ಸುಲಭ ಸಾಧ್ಯವಿತ್ತು.
ಹೀಗಾಗಿ, ರಾಜಕಾರಣಿಗಳು ತಮಗೆ ಸಿಕ್ಕ ರಾಜಕೀಯ ಅಧಿಕಾರವನ್ನು ಬಳಸಿಕೊಂಡು ಕೃಷಿ ಅಥವಾ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಸಿಕೊಂಡು ಟ್ರಸ್ಟ್ಗಳ ಹೆಸರಿನಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದರು. ಶಿಕ್ಷಣ ಸಂಸ್ಥೆ ಸ್ಥಾಪಿದವರು ತಮ ಹಿತರಕ್ಷಣೆಗಾಗಿ ಹಣ ಬಲದಿಂದ ರಾಜಕಾರಣಿಗಳಾಗಿರುವುದು ಉಂಟು. ಅಂದರೆ, ಅಬ್ಕಾರಿ ಲಾಬಿಗಿಂತ ಶಿಕ್ಷಣ ಲಾಬಿ ಪ್ರಬಲವಾಗಿದೆ ಎಂದರೆ ತಪ್ಪಾಗಲಾರದು.
ದೇಶದಲ್ಲಿ 823 ಮೆಡಿಕಲ್ ಕಾಲೇಜುಗಳು; 1,29,603 ಎಂಬಿಬಿಎಸ್ ಸೀಟುಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾಹಿತಿ ಪ್ರಕಾರ ದೇಶದಲ್ಲಿ 823 ವೈದ್ಯಕೀಯ ಕಾಲೇಜುಗಳಿದ್ದು, 1,29,603 ಎಂಬಿಬಿಎಸ್ ಸೀಟುಗಳು ವಾರ್ಷಿಕವಾಗಿ ಲಭ್ಯವಿವೆ. ಸುಮಾರು 388 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದು, ಉಳಿದವು ಖಾಸಗಿ ಕಾಲೇಜುಗಳು.
ಶಿಕ್ಷಣದ ಹಬ್ ಆಗಿರುವ ಕರ್ನಾಟಕದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿವೆ. ವೈದ್ಯಕೀಯ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ ರಾಜ್ಯ 72 ಸ್ನಾತಕ ಮತ್ತು 70 ಸ್ನಾತಕೋತ್ತರ ಮೆಡಿಕಲ್ ಕಾಲೇಜುಗಳಿವೆ. 13,945 ಎಂಬಿಬಿಎಸ್ ಸೀಟುಗಳಿದ್ದರೆ, 7,727 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿವೆ. 24 ಸರ್ಕಾರಿ ಸ್ನಾತಕ ಕಾಲೇಜುಗಳಲ್ಲಿ 4,250 ಎಂಬಿಬಿಎಸ್ ಹಾಗೂ 27 ಸ್ನಾತಕೋತ್ತರ ಕಾಲೇಜುಗಳಲ್ಲಿ 2,126 ಸ್ನಾತಕೋತ್ತರ ವೈದ್ಯಕೀಯ ಸೀಟುಗಳಿವೆ. ಎರಡು ಇಎಸ್ಐ ಮೆಡಿಕಲ್ ಕಾಲೇಜುಗಳಿದ್ದು, 300 ಎಂಬಿಬಿಎಸ್ ಸೀಟುಗಳಿವೆ. 12 ಅಲ್ಪಸಂಖ್ಯಾತರ ಮೆಡಿಕಲ್ ಕಾಲೇಜುಗಳಿದ್ದು, 2,450 ಸ್ನಾತಕ ಹಾಗೂ 1,418 ಸ್ನಾತಕೋತ್ತರ ಕೋರ್ಸ್ಗಳ ಸೀಟುಗಳಿವೆ. ಅಲ್ಲದೆ, 12 ಡೀಮ್ಡೌ ಕಾಲೇಜುಗಳಿದ್ದು, 2,800 ಎಂಬಿಬಿಎಸ್ ಹಾಗೂ 1,753 ಸ್ನಾತಕೋತ್ತರ ಸೀಟುಗಳು ರಾಜ್ಯದಲ್ಲಿ ಲಭ್ಯವಿವೆ.
ಸರ್ಕಾರಿ ಕೋಟಾದಲ್ಲಿ 5,938 ಯುಜಿ, 2,226 ಪಿಜಿ ಸೀಟುಗಳು 48 ಖಾಸಗಿ ಸ್ನಾತಕ ಕಾಲೇಜುಗಳಲ್ಲಿ 9,695 ಎಂಬಿಬಿಎಸ್ ಸೀಟುಗಳು ಹಾಗೂ 43 ಸ್ನಾತಕೋತ್ತರ ಖಾಸಗಿ ಕಾಲೇಜುಗಳಲ್ಲಿ 5,601 ಸ್ನಾತಕೋತ್ತರ ಸೀಟುಗಳು ವಾರ್ಷಿಕವಾಗಿ ದೊರೆಯುತ್ತವೆ. ಸರ್ಕಾರಿ ಕೋಟಾದಡಿಯಲ್ಲಿ 5,938 ಎಂಬಿಬಿಎಸ್ ಸೀಟುಗಳು ಹಾಗೂ 2,226 ಸ್ನಾತಕೋತ್ತರ ಸೀಟು ದೊರೆಯುತ್ತವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಪಡಿಸಿದ ಶುಲ್ಕವನ್ನು ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕು.
ಆಡಳಿತ ಮಂಡಳಿಯ ಸೀಟುಗಳನ್ನು ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪಡೆಯುವ ಅರ್ಹತೆ ಹಾಗೂ ಮೆರಿಟ್ ಆಧಾರದ ಮೇಲೆ ಕೆಇಎ ಮೂಲಕ ಭರ್ತಿ ಮಾಡಲಾಗುತ್ತದೆ. ಹೀಗಾಗಿ ಖಾಸಗಿ ಆಡಳಿತ ಮಂಡಳಿಗೆ ಮೆಡಿಕಲ್ ಸೀಟಿನಲ್ಲಿ ಭಾರಿ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುವುದಕ್ಕೆ ಕಡಿವಾಣ ಬಿದ್ದಿದೆ. ಬಹುತೇಕ ಪ್ರಮುಖ ಖಾಸಗಿ/ಡೀಮ್ಡೌ ಕಾಲೇಜುಗಳ ಹಿಂದೆ ಪ್ರಭಾವಿ ರಾಜಕೀಯ ಕುಟುಂಬಗಳಿರುವುದು ಸತ್ಯ. ಸ್ಥಳೀಯ ಪ್ರಬಲ ರಾಜಕಾರಣಿಗಳ ಒಡೆತನ ಇಲ್ಲವೇ ಹಿಡಿತದಲ್ಲಿವೆ. ಇದು ಕೇವಲ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಲ್ಲ; ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳವರೂ ಇದ್ದಾರೆ.
ಕರ್ನಾಟಕದ ಪ್ರಮುಖ ಮೆಡಿಕಲ್ ಕಾಲೇಜುಗಳು
ದಾವಣಗೆರೆಯ ಜೆ.ಜೆ.ಎಂ. ಮೆಡಿಕಲ್ ಕಾಲೇಜು, ಎಸ್.ಎಸ್. ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ವಿಜಯಪುರದ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು, ಬೆಳಗಾವಿಯ ಕೆ.ಎಲ್.ಇ ಜವಾಹರಲಾಲ್ ನೆಹರೂ ಕಾಲೇಜು, ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಕಾಂಗ್ರೆಸ್ ಪಕ್ಷದ ರಾಜಕಾರಣಿಗಳ ಹಿಡಿತದಲ್ಲಿವೆ.
ಬಾಗಲಕೋಟೆ ಯ ಬಿ.ವಿ.ವಿ. ಸಂಘದ ಮೆಡಿಕಲ್ ಕಾಲೇಜು, ಹಾರೋಹಳ್ಳಿಯ ಡಾ. ಚಂದ್ರಮ ದಯಾನಂದ ಸಾಗರ್ ಮೆಡಿಕಲ್ ಕಾಲೇಜು ಬಿಜೆಪಿಯವರ ಹಿಡಿತದಲ್ಲಿವೆ. ರಾಯಚೂರಿನ ನವೋದಯ ಮೆಡಿಕಲ್ ಕಾಲೇಜು ಪಕ್ಷಾತೀತವಾಗಿ ಪ್ರಭಾವಿಗಳ ಹಿಡಿತದಲ್ಲಿವೆ. ಮಹಾರಾಷ್ಟ್ರದಲ್ಲಿ ರಾಜಕಾರಣಿಗಳ ಜೊತೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಿಡಿತ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ರಾಜಕಾರಣಿಗಳ ಒಡೆತನದ ಕಾಲೇಜುಗಳು ಡೀಮ್ಡೌ ವಿಶ್ವವಿದ್ಯಾನಿಲಯಗಳಿವೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಸಹ ಇದರಿಂದ ಹೊರತಾಗಿಲ್ಲ. ಹೀಗೆ ದೇಶದ ವಿವಿಧ ರಾಜ್ಯಗಳಲ್ಲೂ ರಾಜಕಾರಣಿಗಳ ಒಡೆತನದ ಮೆಡಿಕಲ್ ಕಾಲೇಜುಗಳಿವೆ.
ಒಟ್ಟಾರೆ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಖಾಸಗಿ ಹಾಗೂ ರಾಜಕಾರಣಿಗಳ ಹಿಡಿತದಲ್ಲಿವೆ. ಹೀಗಾಗಿ ಪ್ರಭಾವಿಗಳ ಹಾಗೂ ರಾಜಕಾರಣಿಗಳ ಕಪಿಮುಷ್ಟಿಯಲ್ಲಿ ವೃತ್ತಿ ಶಿಕ್ಷಣ ಸಾಗುತ್ತಿದೆ ಎಂದರೆ ತಪ್ಪಾಗಲಾರದು.
